ಮಧ್ಯಪ್ರದೇಶ| ‘ಗೀಲನ್ ಬಾ’ ಸೋಂಕಿಗೆ ಇಬ್ಬರು ಮಕ್ಕಳು ಮೃತ್ಯು
Photo : timesofindia
ನೀಮುಚ್,ಜ.18: ‘ಗೀಲನ್ ಬಾ’ ಸಿಂಡ್ರೋಮ್ ದೇಶದ ವಿವಿಧೆಡೆ ಆತಂಕ ಸೃಷ್ಟಿಸಿದ್ದು, ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಮಾನಸ ಪಟ್ಟಣದಲ್ಲಿ ಇಬ್ಬರು ಮಕ್ಕಳು ಸೋಂಕಿನಿಂದ ಮೃತಪಟ್ಟಿದ್ದಾರೆ.
ನೀಮುಚ್ ನಗರದಲ್ಲಿ ಸುಮಾರು 15 ಮಂದಿ ಗೀಲನ್ ಬಾ ಸೋಂಕು ಪೀಡಿತರಾಗಿದ್ದಾರೆ. ಆರೋಗ್ಯ ಇಲಾಖೆಯ ದತ್ತಾಂಶಗಳ ಪ್ರಕಾರ, ಒಟ್ಟು ಆರು ಮಂದಿ ಸೋಂಕು ಪೀಡಿತರಾಗಿರುವುದು ಅಧಿಕೃತವಾಗಿ ದೃಢಪಟ್ಟಿದೆ. ಇತರ ಶಂಕಿತ ಪ್ರಕರಣಗಳ ಮೇಲೆ ನಿಗಾವಿರಿಸಲಾಗಿದ್ದು, ನಿಕಟವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ‘ಗೀಲನ್ ಬಾ’ ವೇಗವಾಗಿ ಹರಡುತ್ತಿದ್ದು, ಸೋಂಕುಪೀಡಿತರಲ್ಲಿ ಬಹುತೇಕ ರೋಗಿಗಳು 4ರಿಂದ 17 ವರ್ಷದೊಳಗಿನವರಾಗಿದ್ದಾರೆ.
ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ರಾಜೀವ ಶುಕ್ಲಾ ವಾರ್ಡ್ ನಂ.15ಕ್ಕೆ ಭೇಟಿ ನೀಡಿ ಮೃತ ಬಾಲಕನೊಬ್ಬನ ಕುಟುಂಬಸ್ಥರನ್ನು ಭೇಟಿಯಾದರು. ಸೋಂಕು ಪೀಡಿತರಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸಿದ ಶುಕ್ಲಾ ಅವರು ಮನೆಮನೆ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.