ರಾಜಸ್ಥಾನ | ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಆರೋಪಿಯ ವಿವಾಹದ ವೇಳೆ ED ದಾಳಿ : ಸಪ್ತಪದಿ ತುಳಿಯುವ ಕೆಲವೇ ಕ್ಷಣದ ಮೊದಲು ವರ ಪರಾರಿ
Pc | FP Photo
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಕಾರಣ ಸಪ್ತಪದಿ ತುಳಿಯುವ ಕೆಲವೇ ಕ್ಷಣದ ಮೊದಲು ವರ ವಿವಾಹ ವೇದಿಕೆಯಿಂದ ಪರಾರಿಯಾಗಿದ್ದಾನೆ.
ಜೈಪುರದ ಐಷಾರಾಮಿ ಫೇರ್‌ಮಾಂಟ್ ಹೋಟೆಲ್‌ನಲ್ಲಿ ಸೌರಭ್ ಅಹುಜಾ ಎಂಬಾತನ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿ ಸೌರಭ್ ಅಹುಜಾನನ್ನು ಬಂಧಿಸಲು ಈಡಿ ಅಧಿಕಾರಿಗಳು ಮುದುವೆ ಕಾರ್ಯಕ್ರಮದ ಮೇಲೆ ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ಬಂದಿರುವುದನ್ನು ತಿಳಿದ ತಕ್ಷಣ ಸೌರಭ್ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಈ ಘಟನೆಯು ವಿವಾಹಕ್ಕೆ ಬಂದು ಸೇರಿದ ಎರಡೂ ಕಡೆಯ ಕುಟುಂಬಸ್ಥರನ್ನು ದಿಗ್ಭ್ರಮೆಗೊಳಿಸಿದೆ.
ಸೌರಭ್ ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿ ಕೋಟ್ಯಂತರ ರೂ. ಅಕ್ರಮ ವಹಿವಾಟುಗಳನ್ನು ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈಡಿ ಅಧಿಕಾರಿಗಳು ಸೌರಭ್‌ನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ವಿವಾಹದ ವೇಳೆ ಸೌರಭ್‌ನನ್ನು ಬಂಧಿಸಲು ರಾಯ್ಪುರದಿಂದ ಜೈಪುರಕ್ಕೆ ಒಂದು ತಂಡವನ್ನು ಕಳುಹಿಸಲಾಗಿತ್ತು .
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಗರಣಕ್ಕೆ ಸಂಬಂಧಿಸಿ ಪ್ರಣವೇಂದ್ರ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಇದಲ್ಲದೆ ಸೌರಭ್ ಎಲ್ಲಿದ್ದಾನೆ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ವಧು, ಅವರ ಕುಟುಂಬ ಸದಸ್ಯರು ಮತ್ತು ಇತರ ನಿಕಟ ಸಂಬಂಧಿಗಳನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.