ರಾಹುಲ್ ಗಾಂಧಿಯ ಯಾವುದೇ ಪ್ರಮುಖ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಲಿಲ್ಲ : ಜೈರಾಂ ರಮೇಶ್
ಚುನಾವಣಾ ಆಯೋಗದ ಅಸಮರ್ಥತೆ, ಪಕ್ಷಪಾತ ಧೋರಣೆ ಬಹಿರಂಗಗೊಂಡಿದೆ ಎಂದ ಕಾಂಗ್ರೆಸ್ ನಾಯಕ
ಜೈರಾಂ ರಮೇಶ್ | PC : PTI
ಹೊಸದಿಲ್ಲಿ: ಚುನಾವಣಾ ಆಯೋಗ ರಾಹುಲ್ ಗಾಂಧಿ ಎತ್ತಿರುವ ಯಾವುದೇ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಇದು ಚುನಾವಣಾ ಆಯೋಗದ ಅಸಮರ್ಥತೆ ಮಾತ್ರವಲ್ಲದೆ, ಸ್ಪಷ್ಟ ಪಕ್ಷಪಾತ ಧೋರಣೆ ಬಹಿರಂಗಗೊಂಡಿದೆ ಎಂದು ಮತ ಕಳ್ಳತನ ಆರೋಪಗಳ ಕುರಿತು ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರತಿಕ್ರಿಯಿಸಿದ್ದಾರೆ.
ರವಿವಾರ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತರು, ಬಿಹಾರದಲ್ಲಿ ಎಸ್ಐಆರ್ ಕುರಿತು ಸಮರ್ಥನೆ ಮಾಡಿದ್ದರು ಮತ್ತು ವಿರೋಧ ಪಕ್ಷದ "ಮತ ಕಳ್ಳತನ" ಆರೋಪಗಳನ್ನು "ಆಧಾರರಹಿತ" ಎಂದು ತಿರಸ್ಕರಿಸಿದ್ದರು.
ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಜೈರಾಂ ರಮೇಶ್, ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನ ಆಗಸ್ಟ್ 14ರ ಆದೇಶಗಳನ್ನು ಅಕ್ಷರಶಃ ಜಾರಿಗೊಳಿಸುತ್ತಿದೆಯೇ ಎಂದು ಕೇಳಿದರು.
ಚುನಾವಣಾ ಆಯೋಗದ ಪಕ್ಷಪಾತ ಧೋರಣೆಗೆ ಬೆಟ್ಟದಷ್ಟು ಪುರಾವೆಗಳಿದ್ದರೂ, ತುಂಬಾ ಸರಳವಾಗಿ ಹೇಳುವುದಾದರೆ ಇದು ನಗೆಪಾಟಲಿಗೆ ಈಡಾಗುವಂತಹದ್ದಾಗಿದೆ. ಚುನಾವಣಾ ಆಯೋಗ ರಾಹುಲ್ ಗಾಂಧಿ ಎತ್ತಿರುವ ಯಾವುದೇ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂದು ಜೈರಾಂ ರಮೇಶ್ ಹೇಳಿದರು.