×
Ad

ಮಹಾರಾಷ್ಟ್ರ ಜಿಲ್ಲಾ ಪರಿಷದ್ ಚುನಾವಣೆ| ಶಿವಸೇನೆ ಶಾಸಕ ಸೇರಿದಂತೆ ರಾಜಕಾರಣಿಗಳಿಂದ ಅಪ್ರಾಪ್ತ ವಯಸ್ಕ ಪುತ್ರರೊಂದಿಗೆ ಮತ ಚಲಾವಣೆ!

Update: 2026-02-08 19:30 IST

Photo Credit : ETV Bharat

ಮುಂಬೈ: ಕಳೆದ ತಿಂಗಳು ನಡೆದಿದ್ದ ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಗಳಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಗಳ ನಡುವೆಯೇ ಶನಿವಾರ ನಡೆದ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳಿಂದ ಸ್ಪಷ್ಟ ಲೋಪಗಳನ್ನು ಬೆಟ್ಟು ಮಾಡಿರುವ ಎರಡು ತಾಜಾ ಘಟನೆಗಳು ವರದಿಯಾಗಿವೆ.

PTI ಸುದ್ದಿಸಂಸ್ಥೆಯ ಪ್ರಕಾರ ಜಿಲ್ಲಾ ಪರಿಷದ್ ಚುನಾವಣೆ ಸಂದರ್ಭದಲ್ಲಿ ಅಕ್ಲೂಜ್ ಮತ್ತು ಛತ್ರಪತಿ ಸಂಭಾಜಿನಗರದ ಎರಡು ಮತಗಟ್ಟೆಗಳಲ್ಲಿ ರಾಜಕೀಯ ಮುಖಂಡರ ಅಪ್ರಾಪ್ತ ವಯಸ್ಕ ಪುತ್ರರು ಮತಗಳನ್ನು ಚಲಾಯಿಸಿರುವುದು ಬೆಳಕಿಗೆ ಬಂದಿದೆ.

ಮೊದಲ ಘಟನೆಯಲ್ಲಿ ಅಕ್ಲೂಜ್ ನ ಯಶವಂತ ನಗರದ ಮತಗಟ್ಟೆಗೆ ತಂದೆ ಅರ್ಜುನ ಸಿಂಗ್ ಮೋಹಿತೆ ಪಾಟೀಲ್ ಜೊತೆ ಬಂದಿದ್ದ 14ರ ಹರೆಯದ ಬಾಲಕ ಮತ ಚಲಾಯಿಸಿದ್ದಾನೆ ಎನ್ನಲಾಗಿದೆ.

ಪಾಟೀಲ್ ಸೋಲಾಪುರದ ಮಾಳಶಿರಸ್ನಿಂದ ಎನ್ಸಿಪಿ(ಎಸ್ಪಿ) ಅಭ್ಯರ್ಥಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ಪಾಟೀಲ್ ರ ಪುತ್ರ ಅವರ ಪಕ್ಕದಲ್ಲಿ ನಿಂತುಕೊಂಡು ಇವಿಎಂ ಬಟನ್ ಒತ್ತುತ್ತಿರುವುದನ್ನು ತೋರಿಸಿದೆ.

ತನ್ನ ಮಗನನ್ನು ಸಮರ್ಥಿಸಿಕೊಂಡಿರುವ ಪಾಟೀಲ್,‘ಮತದಾನ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡಲು ನನ್ನ ಮಗ ಬಯಸಿದ್ದ,ಹೀಗಾಗಿ ನಾನು ಆತನನ್ನು ಮತಗಟ್ಟೆಯೊಳಗೆ ಕರೆದೊಯ್ದಿದ್ದೆ. ಮತಗಟ್ಟೆ ಅಧಿಕಾರಿಗಳು ಆಕ್ಷೇಪಿಸಿದ್ದರಾದರೂ ನಾನು ಮತವನ್ನು ಚಲಾಯಿಸುವಾಗ ಪಕ್ಕದಲ್ಲಿ ನಿಂತುಕೊಳ್ಳಲು ಆತನಿಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದೆ. ಇದರಲ್ಲಿ ಆಕ್ಷೇಪಾರ್ಹವಾದ ಏನಾದರೂ ಇದೆ ಎಂದು ನಾನು ಭಾವಿಸಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಪೈಠನ್ ನ ಶಿವಸೇನೆ ಶಾಸಕ ವಿಲಾಸ ಭುಮ್ರೆಯವರು ಮತದಾನದ ಸಮಯದಲ್ಲಿ ತನ್ನ ಹತ್ತರ ಹರೆಯದ ಮಗನೊಂದಿಗೆ ಮತಗಟ್ಟೆ ಪ್ರವೇಶಿಸಿದ್ದರು. ಇವಿಎಂ ಬಳಿ ಮಗನನ್ನು ಕರೆದೊಯ್ದಿದ್ದ ಅವರು ಆತನ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚಲು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ.

ಚುನಾವಣಾ ನಿಯಮಗಳ ಪ್ರಕಾರ ನೋಂದಾಯಿತ ಮತದಾರರು ಮಾತ್ರ ಇವಿಎಂ ಬಳಿ ಹೋಗಲು ಅನುಮತಿಯಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದಿಲೀಪ ಸ್ವಾಮಿಯವರು,ಆರೋಪದ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ಸೂಚಿಸಿದೆ. ಇದೊಂದು ಗಂಭೀರ ಘಟನೆಯಾಗಿದೆ. ವಿವರವಾದ ತನಿಖೆಯನ್ನು ನಡೆಸಲಾಗುವುದು ಮತ್ತು ಹೊಣೆಗಾರಿಕೆಯನ್ನು ನಿಗದಿಗೊಳಿಸಲಾಗುವುದು. ಚುನಾವಣಾಧಿಕಾರಿ ಮತ್ತು ಶಾಯಿ ಹಚ್ಚಿದ ಸಿಬ್ಬಂದಿ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News