×
Ad

‘ದಿ ಕೇರಳ ಸ್ಟೋರಿ 2’ ಟ್ರೇಲರ್ ಗೆ ಮಲಯಾಳಿಗಳಿಂದ ಟ್ರೋಲ್; ಸಾಮಾಜಿಕ ಜಾಲತಾಣಗಳಲ್ಲಿ ‘ಬೀಫ್–ಪರೊಟಾ’ ಚರ್ಚೆ ಜೋರು

“ಬೀಫ್ ಅನ್ನು ಬಲವಂತವಾಗಿ ತಿನ್ನಿಸುವುದಾದರೆ ಕೇರಳದ ಅರ್ಧ ಜನಸಂಖ್ಯೆ ಕ್ಯೂ ನಿಲ್ಲುತ್ತಿತ್ತು” ಎಂದ ಜನರು

Update: 2026-02-19 17:27 IST

Photo source: X

ತಿರುವನಂತಪುರ: ವಿವಾದಾತ್ಮಕ ‘ದಿ ಕೇರಳ ಸ್ಟೋರಿ 2’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೇರಳದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟ್ರೇಲರ್ ನಲ್ಲಿನ ಬೀಫ್ ಸಂಬಂಧಿತ ಸನ್ನಿವೇಶದ ಹಿನ್ನೆಲೆಯಲ್ಲಿ ಮಲಯಾಳಿ ಬಳಕೆದಾರರು ‘ಬೀಫ್–ಪರೊಟಾ’ ಉಲ್ಲೇಖಗಳೊಂದಿಗೆ ತೀಕ್ಷ್ಣ ವ್ಯಂಗ್ಯ, ಮೀಮ್ಗಳು ಹಾಗೂ ವಿಡಂಬನಾತ್ಮಕ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು thehindu.com ವರದಿ ಮಾಡಿದೆ.

ಟ್ರೇಲರ್ ನ ಪ್ರಮುಖ ದೃಶ್ಯವೊಂದರಲ್ಲಿ ಬಂಧಿತ ಮಹಿಳೆಯೊಬ್ಬಳು “ಹಸಿವಿನಿಂದ ಸಾಯುತ್ತೇನೆ, ಆದರೆ ಬೀಫ್ ತಿನ್ನುವುದಿಲ್ಲ” ಎಂದು ಹೇಳುತ್ತಾ ತನ್ನ ಮುಂದೆ ಇಟ್ಟಿರುವ ತಟ್ಟೆಯನ್ನು ತಳ್ಳಿಹಾಕುವ ದೃಶ್ಯವಿದೆ. ಬಳಿಕ ಆಕೆಗೆ ಬಲವಂತವಾಗಿ ಬೀಫ್ ತಿನ್ನಿಸುವುದನ್ನು ತೋರಿಸಲಾಗಿದೆ. ಇದೇ ಸನ್ನಿವೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಹಲವರು ಈ ಚಿತ್ರಣ ಕೇರಳದ ಸಾಮಾಜಿಕ ವಾಸ್ತವಿಕತೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯೆಯಾಗಿ ಅನೇಕರು ಬೀಫ್ ಭಕ್ಷ್ಯಗಳನ್ನು ಸವಿಯುತ್ತಿರುವ ತಮ್ಮ ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕೃತಕ ಬುದ್ಧಿಮತ್ತೆ (ಎಐ) ನೆರವಿನಿಂದ ಟ್ರೇಲರ್ ನ ದೃಶ್ಯವನ್ನು ವ್ಯಂಗ್ಯ ರೂಪದಲ್ಲಿ ಮರುಸೃಷ್ಟಿಸಿ ಪೋಸ್ಟ್ ಮಾಡಿದ್ದಾರೆ. ಒಂದು ವೈರಲ್ ವಿಡಿಯೊದಲ್ಲಂತೂ ನಟರು ಮಧ್ಯದಲ್ಲೇ ದೃಶ್ಯವನ್ನು ನಿಲ್ಲಿಸಿ ನಿರ್ಮಾಪಕರನ್ನು ಪ್ರಶ್ನಿಸುವಂತೆ ತೋರಿಸಲಾಗಿದ್ದು, ಕೊನೆಯಲ್ಲಿ ಪಾತ್ರಧಾರಿಗಳು ನಗುತ್ತಾ ಬೀಫ್ ಹಂಚಿಕೊಳ್ಳುವ ದೃಶ್ಯವಿದೆ.

ಮತ್ತೊಂದು ಪೋಸ್ಟ್ನಲ್ಲಿ ಮಹಿಳೆಯೊಬ್ಬಳು ಟ್ರೇಲರ್ ವೀಕ್ಷಿಸುತ್ತಾ ಕೈಯಲ್ಲಿ ಬೀಫ್ ತಟ್ಟೆ ಹಿಡಿದು “ಮಲಯಾಳಿ ಮಹಿಳೆಯರ ಬಗ್ಗೆ ತಪ್ಪು ಕಲ್ಪನೆ ಮೂಡಿಸಲಾಗಿದೆ” ಎಂದು ಹೇಳುವ ರೀತಿಯ ವಿಡಿಯೊ ಹಂಚಿಕೆಯಾಗಿದೆ. ‘ಬ್ರೇಕಿಂಗ್ ನ್ಯೂಸ್’ ಶೈಲಿಯ ವ್ಯಂಗ್ಯ ಪೋಸ್ಟ್ಗಳಲ್ಲಿ, ಟ್ರೇಲರ್ ಬಿಡುಗಡೆಯಾದ ನಂತರ ಕೇರಳದಲ್ಲಿ ಬೀಫ್ ಬೆಲೆ ಏರಿಕೆಯಾಗಿದೆ ಎಂಬ ಹೇಳಿಕೆಗಳೂ ಕಾಣಿಸಿಕೊಂಡಿವೆ.

“ಬಂಧಿತ ಮಹಿಳೆಗೆ ಪರೊಟಾ ಜೊತೆ ಬಡಿಸದ ಕಾರಣವೇ ಅವಳು ಬೀಫ್ ತಿರಸ್ಕರಿಸಿದ್ದಾಳೆ” ಎಂಬ ತಮಾಷೆಯನ್ನೂ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲಾಗಿದೆ. ಕೇರಳದಲ್ಲಿ ಜನಪ್ರಿಯವಾಗಿರುವ ಬೀಫ್–ಪರೊಟಾ ಆಹಾರ ಸಂಸ್ಕೃತಿಗೆ ಇದು ಸ್ಪಷ್ಟ ನಿದರ್ಶನವಾಗಿದೆ. ಕೆಲವರು ಚಿತ್ರ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳ ಹೊರಗೆ ‘ಬೀಫ್ ಉತ್ಸವ’ ನಡೆಸುವ ಬಗ್ಗೆ ವ್ಯಂಗ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಬೀಫ್ ಅನ್ನು ಬಲವಂತವಾಗಿ ತಿನ್ನಿಸುವುದಾದರೆ ಕೇರಳದ ಅರ್ಧ ಜನಸಂಖ್ಯೆ ಸರತಿಯಲ್ಲಿ ನಿಲ್ಲುತ್ತಿತ್ತು” ಎಂಬ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ.

ಇದರ ನಡುವೆ, ಮಲಯಾಳಂ ಚಿತ್ರಗಳಾದ ‘ಗೋಧಾ’, ‘ಪ್ರೇಮಂ’ ಹಾಗೂ ‘ಹೃದಯಂ’ ಸಿನಿಮಾಗಳಲ್ಲಿನ ಬೀಫ್–ಪರೊಟಾ ಸನ್ನಿವೇಶಗಳನ್ನು ಮತ್ತೆ ಹಂಚಿಕೊಳ್ಳಲಾಗುತ್ತಿದೆ. ಟ್ರೇಲರ್ ನಲ್ಲಿನ ಚಿತ್ರಣ ಕೇರಳದ ಆಹಾರ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದೆ.

ಚಿತ್ರದ ಮೊದಲ ಭಾಗ ಈ ಹಿಂದೆ ಬಿಡುಗಡೆಯಾಗಿದ್ದಾಗಲೂ ರಾಜ್ಯದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಮಟ್ಟದಲ್ಲಿ ಚರ್ಚೆ ಜೋರಾಗಿತ್ತು. ಈ ಬಾರಿಯೂ ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರು ಚಿತ್ರವು ಕೇರಳವನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನವೆಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News