ಪ್ರಜಾಪ್ರಭುತ್ವವನ್ನು ರಕ್ಷಿಸುವಂತೆ ಕಾರ್ಯಕ್ರಮದ ವೇದಿಕೆಯಲ್ಲೇ ಸಿಜೆಐಗೆ ಮಮತಾ ಬ್ಯಾನರ್ಜಿ ಆಗ್ರಹ
Image: PTI
ಕೋಲ್ಕತಾ,ಜ.18: ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಶನಿವಾರ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಸೂರ್ಯಕಾಂತ್ ಅವರಿಗೆ ಮನವಿ ಮಾಡಿಕೊಂಡ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ತನಿಖಾ ಸಂಸ್ಥೆಗಳ ದುರುಪಯೋಗದ ಬಗ್ಗೆ ಅವರನ್ನು ಎಚ್ಚರಿಸಿದರು.
ಕಲ್ಕತ್ತಾ ಉಚ್ಚ ನ್ಯಾಯಾಲಯದ ನೂತನ ಜಲಪೈಗುರಿ ಸಂಚಾರ ಪೀಠದ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ʼನಾಗರಿಕರನ್ನು ತಪ್ಪಾಗಿ ಗುರಿಯಾಗಿಸಿಕೊಳ್ಳಲಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿದರು. ‘ದಯವಿಟ್ಟು ಸಂವಿಧಾನ, ಪ್ರಜಾಪ್ರಭುತ್ವ, ನ್ಯಾಯಾಂಗ, ಇತಿಹಾಸ, ಭೌಗೋಳಿಕತೆ ಮತ್ತು ದೇಶದ ಗಡಿಗಳನ್ನು ವಿನಾಶದಿಂದ ರಕ್ಷಿಸಿ’ ಎಂದು ಹೇಳಿದರು.
ಸಿಜೆಐ ಅವರನ್ನು ‘ಸಂವಿಧಾನದ ರಕ್ಷಕ’ ಎಂದು ಬಣ್ಣಿಸಿದ ಮಮತಾ, ನ್ಯಾಯಾಂಗವು ನಿಷ್ಪಕ್ಷಪಾತವಾಗಿರಬೇಕು ಎಂದರು. ‘ಮಾಧ್ಯಮ ವಿಚಾರಣೆ’ಗಳ ವಿಷಯವನ್ನೂ ಪ್ರಸ್ತಾವಿಸಿದ ಅವರು, ನ್ಯಾಯಾಲಯಗಳು ತೀರ್ಪುಗಳನ್ನು ನೀಡುವ ಮೊದಲೇ ಪ್ರಕರಣಗಳನ್ನು ಸಾರ್ವಜನಿಕವಾಗಿ ಚರ್ಚಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಬೆಟ್ಟು ಮಾಡಿದರು.
‘ಪ್ರಕರಣಗಳು ಅಂತಿಮಗೊಳ್ಳುವ ಮುನ್ನ ಮಾಧ್ಯಮ ವಿಚಾರಣೆಗಳು ನಡೆಯಬಾರದು. ಇದು ಜನರನ್ನು ಅವಮಾನಿಸಲು ಒಂದು ಸಾಧನವಾಗಿದೆ. ದಯವಿಟ್ಟು ತನಿಖಾ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಅವಮಾನಿಸಲು ಯತ್ನಿಸುವುದಿಲ್ಲ ಎನ್ನುವುದನ್ನು ಖಚಿತಪಡಿಸಿ. ನಾನು ನನಗಾಗಿ ಮಾತನಾಡುತ್ತಿಲ್ಲ. ಪ್ರಜಾಪ್ರಭುತ್ವ, ಜನತೆ, ನ್ಯಾಯಾಂಗ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾವು ನಿಮ್ಮ ರಕ್ಷಣೆಯಡಿಯಲ್ಲಿ ಇದ್ದೇವೆ. ನಿಮಗಿಂತ ಯಾರೂ ಮೇಲಲ್ಲ’ ಎಂದು ಮಮತಾ ನ್ಯಾ.ಸೂರ್ಯಕಾಂತ್ ಅವರನ್ನು ಉದ್ದೇಶಿಸಿ ಹೇಳಿದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್ ಸೇರಿದಂತೆ 10 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಈ.ಡಿ.) ದಾಳಿಯ ಬಳಿಕ ಟಿಎಂಸಿ ಸರಕಾರ ಮತ್ತು ಈ.ಡಿ.ನಡುವೆ ಹೊಗೆಯಾಡುತ್ತಿರುವ ಉದ್ವಿಗ್ನತೆಯ ನಡುವೆ ಮುಖ್ಯಮಂತ್ರಿಗಳ ಈ ಹೇಳಿಕೆಗಳು ಹೊರಬಿದ್ದಿವೆ.