ಕೆನಡಾದಲ್ಲಿ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ದಾಳಿ ಪ್ರಕರಣ : ದಿಲ್ಲಿಯಲ್ಲಿ ಓರ್ವನ ಬಂಧನ
Photo credit: NDTV
ಹೊಸದಿಲ್ಲಿ : ಕೆನಡಾದಲ್ಲಿ ಕಾಮೆಡಿಯನ್ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ಗೆ ಸೇರಿದ ಶೂಟರ್‌ನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ.
ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ನ ಸದಸ್ಯ ಮಾನ್ಸಿಂಗ್ ಸೆಖೋನ್ ಬಂಧಿತ ಆರೋಪಿ. ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದ ಪಿತೂರಿಯಲ್ಲಿ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ರೆಯ ಕ್ಯಾಪ್ಸ್ ಕೆಫೆ ಮೇಲೆ ಜುಲೈ ಮತ್ತು ಅಕ್ಟೋಬರ್ ನಡುವೆ ಕನಿಷ್ಠ ಮೂರು ಬಾರಿ ಗುಂಡಿನ ದಾಳಿ ನಡೆದಿತ್ತು. ಜುಲೈ 10ರಂದು ಮೊದಲ ಬಾರಿಗೆ ನಡೆದ ಗುಂಡಿನ ದಾಳಿಯ ವೇಳೆ ಮಾನ್ಸಿಂಗ್ ಸೆಖೋನ್ ಆರೋಪಿಗಳಿಗೆ ಶಸ್ತ್ರಾಸ್ತ್ರಗಳು ಮತ್ತು ವಾಹನವನ್ನು ಒದಗಿಸಿದ್ದಾನೆ ಎಂದು ಆರೋಪಿಸಲಾಗಿದೆ. ಶೂಟರ್‌ಗಳು ಬಳಸಿದ್ದ ವಾಹನವನ್ನು ಕೆನಡಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾನ್ಸಿಂಗ್ ಸೆಖೋನ್ ಆಗಸ್ಟ್‌ನಲ್ಲಿ ಕೆನಡಾದಿಂದ ಪಲಾಯನ ಮಾಡಿ ಭಾರತಕ್ಕೆ ಮರಳಿದ್ದ ಎನ್ನಲಾಗಿದೆ.
ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್‌ವೊಂದನ್ನು ದಿಲ್ಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಕಳ್ಳಸಾಗಣೆದಾರರು ಸೆಖೋನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿರುವುದಾಗಿ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದರು. ಇದರಂತೆ ಪೊಲೀಸ್ ಮಾನ್ಸಿಂಗ್ ಸೆಖೋನ್ ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.