×
Ad

ಆಸ್ಪತ್ರೆಯ ಐಸಿಯುನಲ್ಲಿ ಇಲಿಗೆ ಆಟ; ರೋಗಿಗೆ ಪ್ರಾಣಸಂಕಟ!

Update: 2024-02-12 10:18 IST

ಹೈದರಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯತ್ತಿದ್ದ ರೋಗಿಗೆ ಇಲಿ ಕಚ್ಚಿ ತೀವ್ರ ಅಸ್ವಸ್ಥಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಮಗ್ರ ತನಿಖೆಗೆ ಆದೇಶಿಸಿದೆ.

43 ವರ್ಷ ವಯಸ್ಸಿನ ರೋಗಿಯ ಬಲಗೈ ಬೆರಳುಗಳನ್ನು ಹಾಗೂ ಹಿಮ್ಮಡಿಗಳನ್ನು ಶನಿವಾರ ಇಲಿ ಕಚ್ಚಿದೆ ಎಂದು ರೋಗಿಯ ಜತೆಗೆ ಸಹಾಯಕ್ಕೆ ಇದ್ದ ವ್ಯಕ್ತಿ ವೈದ್ಯರಿಗೆ ತಿಳಿಸಿದ್ದಾರೆ. ಹೈದರಾಬಾದ್ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಈ ರೋಗಿಯನ್ನು ಬಳಿಕ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು.

ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಹಿರಿಯ ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಯನ್ನು ವಿಚಾರಿಸಿದರು. ಇದರ ಜತೆಗೆ ಲೋಪಗಳಿಗೆ ಕಾರಣರಾದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಶಿಸ್ತುಕ್ರಮವನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಸಿಯು ಘಟಕದ ಪಕ್ಕದ ಡಯಾಲಿಸಿಸ್ ಘಟಕವನ್ನು ನವೀಕರಿಸಲಾಗುತ್ತಿದ್ದು, ಈ ಕಾಮಗಾರಿಯ ವೇಳೆ ಇಲಿಗಳು ಐಸಿಯು ಪ್ರವೇಶಿಸಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಾಸಿಗೆಯ ಬದಿಯಲ್ಲಿ ರೋಗಿಯ ಸಹಾಯಕರು ಸಮರ್ಪಕವಾಗಿ ತ್ಯಾಜ್ಯ ಅಹಾರ ಪದಾರ್ಥಗಳನ್ನು ವಿಲೇವಾರಿ ಮಾಡದಿರುವುದು ಕೂಡಾ ಇಲಿಕಾಟಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News