ದುಪಟ್ಟಾ ಎಳೆದ ದುಷ್ಕರ್ಮಿಗಳು, ಬೈಕ್ ನಡಿ ಬಿದ್ದು ಬಾಲಕಿ ಮೃತ್ಯು
Photo: twitter@NDTV
ಅಂಬೇಡ್ಕರ್ ನಗರ: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಶಾಲೆಯಿಂದ ಸೈಕಲ್ ನಲ್ಲಿ ಮನೆಗೆ ಮರಳುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಾಲಕಿಯ ದುಪಟ್ಟಾ ಎಳೆದ ಪರಿಣಾಮ ಬಾಲಕಿ ತನ್ನ ಸಮತೋಲನವನ್ನು ಕಳೆದುಕೊಂಡು ನೆಲಕ್ಕೆ ಬಿದ್ದಿದ್ದು, ನಂತರ ಹಿಂದಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಹನ್ಸ್ವರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೀರಾಪುರ್ ಮಾರುಕಟ್ಟೆ ಬಳಿ ಅಪಘಾತ ಸಂಭವಿಸಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೀಡಿಯೊಗಳಲ್ಲಿ, ಹುಡುಗಿ ತನ್ನ ಸ್ನೇಹಿತೆಯೊಂದಿಗೆ ರಸ್ತೆಯಲ್ಲಿ ತನ್ನ ಸೈಕಲ್ ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ನಂತರ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ದುಪಟ್ಟಾ ವನ್ನು ಎಳೆಯಲು ಪ್ರಯತ್ನಿಸಿದರು, ಇದರಿಂದಾಗಿ ಬಾಲಕಿ ಸಮತೋಲನ ತಪ್ಪಿ ನೆಲಕ್ಕೆ ಅಪ್ಪಳಿಸಿದಳು. ಬಾಲಕಿ ನೆಲಕ್ಕೆ ಬಿದ್ದಾಗ, ಮತ್ತೊಂದು ಬೈಕ್ ಆಕೆಗೆ ಡಿಕ್ಕಿ ಹೊಡೆದು, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ದವಡೆ ಮುರಿದು ಆಕೆಯ ಸಾವಿಗೆ ಕಾರಣವಾಯಿತು.
ಪೊಲೀಸರ ಪ್ರಕಾರ, ಬಾಲಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬೈಕ್ ನಲ್ಲಿದ್ದ ವ್ಯಕ್ತಿ ಬಾಲಕಿಯ ದುಪಟ್ಟಾ ಎಳೆದ ಇಬ್ಬರು ದುಷ್ಕರ್ಮಿಗಳ ಸಹಚರನಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶವಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿನಿಯ ಕುಟುಂಬದವರು ಆಕೆಯ ಅಂತ್ಯಕ್ರಿಯೆ ನಡೆಸಿದರು.