ರಶ್ಯಾ | ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿಯ ಮೃತದೇಹ ಪತ್ತೆ
Photo | NDTV
ಹೊಸದಿಲ್ಲಿ : 19 ದಿನಗಳ ಹಿಂದೆ ರಶ್ಯಾದ ಉಫಾ ನಗರದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿಯ ಮೃತದೇಹ ಗುರುವಾರ ಡ್ಯಾಂನಲ್ಲಿ ಪತ್ತೆಯಾಗಿದೆ.
ರಾಜಸ್ಥಾನದ ಅಲ್ವಾರ್‌ಮ ಲಕ್ಷ್ಮಣ್‌ಗಢದ ಕಫನ್ವಾಡ ಗ್ರಾಮದ ನಿವಾಸಿ ಅಜಿತ್ ಸಿಂಗ್ ಚೌಧರಿ 2023ರಿಂದ ಬಶ್ಕಿರ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದರು.
ಅಕ್ಟೋಬರ್ 19ರಂದು ಹಾಲು ಖರೀದಿಸಲು ಹೋಗುವುದಾಗಿ ಹೇಳಿ ಹಾಸ್ಟೆಲ್‌ನಿಂದ ಹೊರ ಹೋಗಿದ್ದ ಅಜಿತ್ ಸಿಂಗ್ ಬಳಿಕ ನಾಪತ್ತೆಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಗುರುವಾರ ವೈಟ್ ರಿವರ್ ಬಳಿ ಇರುವ ಡ್ಯಾಂನಲ್ಲಿ ಅಜಿತ್ ಸಿಂಗ್ ಚೌಧರಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ರಶ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಕ್ಷಣದ ಹೇಳಿಕೆ ನೀಡಿಲ್ಲ. ಆದರೆ ಗುರುವಾರ ಅವರ ಸಾವಿನ ಬಗ್ಗೆ ಚೌಧರಿ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
19 ದಿನಗಳ ಹಿಂದೆ ನದಿ ದಂಡೆಯ ಬಳಿ ಚೌಧರಿ ಅವರ ಬಟ್ಟೆ, ಮೊಬೈಲ್ ಫೋನ್ ಮತ್ತು ಶೂ ಪತ್ತೆಯಾಗಿದೆ. ಅನುಮಾನಾಸ್ಪದ ಘಟನೆ ನಡೆದಿದೆ ಎಂದು ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಹೇಳಿದ್ದಾರೆ.
"ಕಫನ್ವಾಡಾ ಗ್ರಾಮದ ಅಜಿತ್ ಅವರನ್ನು ಅವರ ಕುಟುಂಬವು ವೈದ್ಯಕೀಯ ಶಿಕ್ಷಣಕ್ಕಾಗಿ ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಒಟ್ಟುಗೂಡಿಸಿ ರಶ್ಯಾಕ್ಕೆ ಕಳುಹಿಸಿತ್ತು. ರಷ್ಯಾದ ನದಿಯಲ್ಲಿ ಅಜಿತ್ ಅವರ ಮೃತದೇಹ ಪತ್ತೆಯಾಗಿದೆ. ಈ ಸುದ್ದಿ ಆಘಾತಕಾರಿಯಾಗಿದೆ. ಅಲ್ವಾರ್ ಕುಟುಂಬಕ್ಕೆ ಅತ್ಯಂತ ದುಃಖಕರ ಕ್ಷಣವಾಗಿದೆ. ಅನುಮಾನಾಸ್ಪದವಾಗಿ ಯುವಕನನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಜಿತೇಂದ್ರ ಸಿಂಗ್ ಅಲ್ವಾರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.