ಪ್ರಧಾನಿ ಮೋದಿಯಿಂದ ಸಸಿ ನೆಡುವ ಪೋಸ್ಟ್ : ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ
ಅದಾನಿಗೆ ಅರಣ್ಯನಾಶಕ್ಕೆ ಅವಕಾಶ ನೀಡಿದ್ದಾರೆಂದು ಆಕ್ರೋಶ
ನರೇಂದ್ರ ಮೋದಿ |Photo credit: X/@narendramodi
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕ ಕಲ್ಯಾಣ ಮಾರ್ಗದಲ್ಲಿನ ತಮ್ಮ ಅಧಿಕೃತ ನಿವಾಸದಲ್ಲಿ ಕದಂಬ ಸಸಿಯನ್ನು ನೆಡುವ ಕುರಿತು ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಈ ಶಶಿಯನ್ನು ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್–III ಉಡುಗೊರೆಯಾಗಿ ನೀಡಿದ್ದರು. ‘ಏಕ್ ಪೇಡ್ ಮಾಕೇ ನಾಮ್’ (ತಾಯಿಗೆ ಸಮರ್ಪಣೆಗಾಗಿ ಒಂದು ಗಿಡ) ಅಭಿಯಾನದ ಭಾಗವಾಗಿ ಈ ಗಿಡವನ್ನು ನೆಡಲಾಯಿತು. 2021ರಿಂದ ಪ್ರಾರಂಭವಾದ ಈ ಅಭಿಯಾನದಡಿ ಈಗಾಗಲೇ 10 ಕೋಟಿಗೂ ಹೆಚ್ಚು ಗಿಡಗಳನ್ನು ನೆಡಲು ಪ್ರೇರಣೆ ನೀಡಿದೆ ಎಂದು ವರದಿಯಾಗಿದೆ
ಮೋದಿ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡರು. ಕಿಂಗ್ ಚಾರ್ಲ್ಸ್ ಅವರ ಪರಿಸರ ಪ್ರೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗ್ಗೆ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಒಂದು ಗಿಡ ನೆಡುವುದರಿಂದ ಏನು ಪ್ರಯೋಜನ, ಸರಕಾರವೇ ಅದಾನಿ ಗುಂಪಿಗೆ ಅರಣ್ಯ ನಾಶಕ್ಕೆ ಅವಕಾಶ ನೀಡುತ್ತಿದೆ ಎಂದು ಹಲವರು ಟೀಕಿಸಿದ್ದಾರೆ. ಛತ್ತೀಸ್‌ಗಢದ ಹಸ್ದೇವೋ ಅರಣ್ಯದಲ್ಲಿ 1,898 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಅನುಮತಿ ನೀಡಿರುವುದು, ಭಗಲ್ಪುರದಲ್ಲಿ ಲಕ್ಷಾಂತರ ಮರಗಳನ್ನು ಕಡಿಯುವ ಯೋಜನೆಯನ್ನು ಮುಂದಿಟ್ಟು ಪ್ರಧಾನಿಗೆ ಟೀಕಿಸಿದ್ದಾರೆ.
ʼಏಕ್ ಪೇಡ್ ಮಾಕೇ ನಾಮ್, ದಶ್ ಲಾಕ್ ಪೇಡ್ ಅದಾನಿ ಕೆ ನಾಮ್” ಎಂಬ ಹಾಸ್ಯಮಯ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದೆ. ಮೋದಿ ಮತ್ತು ಅದಾನಿ ಅವರನ್ನು ಟೀಕಿಸಿರುವ ಎಡಿಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿಕೊಂಡಿದೆ.
ಕೆಲವರು ಹಸ್ದೇವೋ ಅರಣ್ಯದ ಹಳೆಯ ಮತ್ತು ಈಗಿನ ಹೊಸ ಫೋಟೋಗಳನ್ನು ಹಂಚಿಕೊಂಡು ಅರಣ್ಯ ನಾಶದ ತೀವ್ರತೆ ಬಗ್ಗೆ ಗಮನ ಸೆಳೆದಿದ್ದಾರೆ. ಒಬ್ಬ ಯುವ ಹವಾಮಾನ ಹೋರಾಟಗಾರ್ತಿ “ಅದಾನಿಯನ್ನು ನಿಲ್ಲಿಸಿ! ಹಸ್ಡಿಯೊ ಅರಣ್ಯವನ್ನು ಮತ್ತು ನಮ್ಮ ಭವಿಷ್ಯವನ್ನು ಉಳಿಸಿ” ಎಂಬ ಫಲಕ ಹಿಡಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎರಡು ಮರಗಳಿಗೆ ನೀರು ಹಾಕಿ ನಂತರ ಕೋಟ್ಯಂತರ ಮರಗಳನ್ನು ಕಡಿಯಲು ಅದಾನಿಗೆ ಹಸ್ತಾಂತರಿಸುವುದು ನಿಜವಾದ ದೇಶಭಕ್ತಿ ಎಂದು ಓರ್ವ ಎಕ್ಸ್ ಬಳಕೆದಾರರು ಟೀಕಿಸಿದ್ದಾರೆ. 1,050 ಎಕರೆ, ಭಾಗಲ್ಪುರದಲ್ಲಿ 1 ಮಿಲಿಯನ್ ಮರಗಳು, ಅದಾನಿಯ ವಿದ್ಯುತ್ ಸ್ಥಾವರಕ್ಕೆ 33 ವರ್ಷಗಳ ಗುತ್ತಿಗೆ, ಮೋದಿ ಜಿ, ನೀವು ದೇಶವನ್ನು ಎಷ್ಟು ಮೂರ್ಖರನ್ನಾಗಿ ಮಾಡುತ್ತೀರಿ? ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.