×
Ad

‘ಮೋದಿ ಅತ್ಯುತ್ತಮ ನಟ’: ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ ಪ್ರಕಾಶ್‌ ರಾಜ್‌ ವ್ಯಂಗ್ಯ!

Update: 2023-11-15 16:10 IST

ಪ್ರಕಾಶ್ ರಾಜ್ (PTI) 

ಹೊಸದಿಲ್ಲಿ: ಪ್ರಧಾನಿ ಮೋದಿಯವರನ್ನು ʼಅತ್ಯುತ್ತಮ ನಟʼ ಎಂದು ವ್ಯಂಗ್ಯವಾಡಿರುವ ನಟ ಪ್ರಕಾಶ್ ರಾಜ್ ಅವರ ಸಂದರ್ಶನದ ತುಣುಕೊಂದು ವೈರಲ್‌ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿಪರ-ವಿರೋಧ ವ್ಯಕ್ತವಾಗಿದೆ.

ಗೌರಿ ಲಂಕೇಶ್‌ ಹತ್ಯೆ ಬಳಿಕ ಹಿಂದುತ್ವ, ಕೋಮುವಾದಿ ರಾಜಕಾರಣಕ್ಕಾಗಿ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ಪ್ರಕಾಶ್‌ ರಾಜ್‌ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ರಾಜಕೀಯ ಕ್ಷೇತ್ರಕ್ಕೂ ಪ್ರವೇಶಿಸಿದ್ದ ಪ್ರಕಾಶ್ ರಾಜ್ 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆ ನಂತರ ನೇರ‌ ರಾಜಕೀಯದಿಂದ ದೂರ ಉಳಿದಿರುವ ಪ್ರಕಾಶ್ ರಾಜ್ ತಮ್ಮ ರಾಜಕೀಯ ಅಭಿಪ್ರಾಯ, ಟೀಕೆಗಳನ್ನು ಮಂಡಿಸುತ್ತಲೇ ಇದ್ದಾರೆ.

ಇತ್ತೀಚೆಗೆ ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಿ ಸಂಚಲನ ಮೂಡಿಸಿದ್ದಾರೆ.

ಕಾರ್ಯಕ್ರಮದ ನಿರೂಪಕಿ “ನೀವು ಮತ್ತು ನಟ ಕಮಲ್ ಹಾಸನ್ ಅತ್ಯುತ್ತಮ ನಟರು, ಆದರೆ ರಾಜಕೀಯದಲ್ಲಿ ಸೋಲುತ್ತಿರುವಿರಿ. ಹಾಗಾದರೆ ರಾಜಕೀಯದಲ್ಲಿ ನಿಮಗಿಂತ ಉತ್ತಮ ನಟರು ಇದ್ದಾರೆಯೇ?” ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್‌ ರಾಜ್‌ ತಕ್ಷಣವೇ ಮೋದಿ ಹೆಸರನ್ನು ಹೇಳಿದ್ದಾರೆ.

“ಮೋದಿ ಇದ್ದಾರೆ. ಅವರೇ ಅತ್ಯುತ್ತಮ ವಾಗ್ಮಿ, ಉತ್ತಮ ಪ್ರದರ್ಶನ ನೀಡುವವರು, ವಸ್ತ್ರವಿನ್ಯಾಸ ವಿಭಾಗ, ಹೇರ್ ಸ್ಟೈಲ್ ವಿಭಾಗ, ಎಲ್ಲವೂ ಅವರ ಬಳಿ ಇದೆ” ಎಂದು ಪ್ರಕಾಶ್ ರಾಜ್ ಕುಟುಕಿದ್ದಾರೆ.

ಸದ್ಯ ಪ್ರಕಾಶ್ ರಾಜ್ ಅವರ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸುತ್ತಿದೆ. ಹಲವಾರು ನೆಟ್ಟಿಗರು ಪ್ರಕಾಶ್‌ ರಾಜ್‌ ಸಮಯಪ್ರಜ್ಞೆ ಹಾಗೂ ದಿಟ್ಟ ನುಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರಾದರೂ, ಮೋದಿ ಅಭಿಮಾನಿಗಳು ಪ್ರಕಾಶ್‌ ರಾಜ್‌ ವಿರುದ್ಧ ಮುಗಿಬಿದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News