ಷೇರು ಮಾರುಕಟ್ಟೆ ಟ್ರೇಡಿಂಗ್ ವಂಚನೆ | 72 ವರ್ಷದ ಮುಂಬೈ ಉದ್ಯಮಿಗೆ 35 ಕೋಟಿ ರೂಪಾಯಿ ನಷ್ಟ
ಸಾಂದರ್ಭಿಕ ಚಿತ್ರ
ಮುಂಬೈ: ನಾಲ್ಕು ವರ್ಷಗಳ ಕಾಲ ತಿಳಿಯದೆಯೇ ಡಿಮ್ಯಾಟ್ ಖಾತೆಯನ್ನು ದುರುಪಯೋಗಪಡಿಸಿಕೊಂಡ ಪರಿಣಾಮ, ನಗರದ 72 ವರ್ಷದ ಹಿರಿಯ ಉದ್ಯಮಿ ಭರತ್ ಹರಕ್‌ಚಂದ್ ಶಾ ಅವರಿಗೆ 35 ಕೋಟಿ ರೂಪಾಯಿ ನಷ್ಟವಾಗಿರುವ ಗಂಭೀರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಕಂಪೆನಿಯ ಕೆಲ ಪ್ರತಿನಿಧಿಗಳು ಸಂಘಟಿತವಾಗಿ ಈ ಹಣಕಾಸು ವಂಚನೆ ನಡೆಸಿದ್ದಾರೆ ಎಂದು ಶಾ ಆರೋಪಿಸಿದ್ದಾರೆ.
ಪರೇಲ್ ಪ್ರದೇಶದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬಾಡಿಗೆಯ ಅತಿಥಿಗೃಹ ನಡೆಸುತ್ತಿರುವ ಶಾ ದಂಪತಿಗೆ 1984ರಲ್ಲಿ ತಂದೆಯಿಂದ ಆನುವಂಶಿಕವಾಗಿ ಷೇರು ಬಂಡವಾಳ ಲಭಿಸಿತ್ತು. ಷೇರು ಮಾರುಕಟ್ಟೆಯ ಜ್ಞಾನವಿಲ್ಲದ ಕಾರಣ ಅವರು ಯಾವುದೇ ಟ್ರೇಡಿಂಗ್ ನಲ್ಲಿ ತೊಡಗಿಸಿಕೊಳ್ಳಿರಲಿಲ್ಲ. 2020ರಲ್ಲಿ ಮಿತ್ರರ ಸಲಹೆಯ ಮೇರೆಗೆ ಗ್ಲೋಬ್ ಕ್ಯಾಪಿಟಲ್‌ನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ತೆರೆಯುವ ಮೂಲಕ ತಮ್ಮ ಷೇರುಗಳನ್ನು ಕಂಪೆನಿಗೆ ವರ್ಗಾಯಿಸಿದ್ದರು.
ಖಾತೆ ತೆರೆಯುತ್ತಿದ್ದಂತೆಯೇ, ಕಂಪೆನಿಯ ಪ್ರತಿನಿಧಿಗಳು ಯಾವುದೇ ಹೆಚ್ಚುವರಿ ಹೂಡಿಕೆ ಇಲ್ಲದೆ ಲಾಭ ನೀಡುವ ಭರವಸೆ ನೀಡಿ, “ವೈಯಕ್ತಿಕ ಮಾರ್ಗದರ್ಶಿಗಳು” ಎಂದು ಅಕ್ಷಯ್ ಬರಿಯಾ ಮತ್ತು ಕರಣ್ ಸಿರೋಯಾ ಎಂಬ ಇಬ್ಬರನ್ನು ನಿಯೋಜಿಸಿದ್ದರು. ಬಳಿಕ, ಇವರು ಶಾ ದಂಪತಿಯ ಖಾತೆಗಳ ಸಂಪೂರ್ಣ ನಿಯಂತ್ರಣವನ್ನು ಪಡೆದು ಮನಗೆ ಭೇಟಿ ನೀಡಿ, ಒಟಿಪಿ, ಇಮೇಲ್ ಮತ್ತು ಮೊಬೈಲ್ ಸಂದೇಶಗಳ ಆಧಾರದ ಮೇಲೆ ಎಲ್ಲಾ ವಹಿವಾಟುಗಳನ್ನು ಅವರೇ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರತಿ ವರ್ಷ ಕಳುಹಿಸಿದ ಸ್ಟೇಟ್ ಮೆಂಟ್ ಗಳಲ್ಲಿ ಲಾಭ ತೋರಿಸಿದ ಕಾರಣದಿಂದ ಶಾ ದಂಪತಿಗೆ ಯಾವುದೇ ಅನುಮಾನ ಬಂದಿರಲಿಲ್ಲ. ನಿಜವಾದ ಟ್ರೇಡಿಂಗ್ ಚಟುವಟಿಕೆಗಳನ್ನು ಮರೆಮಾಚಿದ ಕಂಪೆನಿ, ಸುಳ್ಳು ವಿವರಗಳನ್ನು ನೀಡುತ್ತಿತ್ತು ಎಂದು ನಂತರ ಬಹಿರಂಗವಾಗಿದೆ.
ಈ ವರ್ಷದ ಜುಲೈನಲ್ಲಿ ಗ್ಲೋಬ್ ಕ್ಯಾಪಿಟಲ್ ನ ನಿರ್ವಹಣಾ ವಿಭಾಗದಿಂದ “ನಿಮ್ಮ ಖಾತೆಗೆ 35 ಕೋಟಿ ರೂಪಾಯಿ ಡೆಬಿಟ್ ಬ್ಯಾಲೆನ್ಸ್ ಬಂದಿದೆ; ತಕ್ಷಣ ಪಾವತಿಸದಿದ್ದರೆ ಷೇರುಗಳನ್ನು ಮಾರಲಾಗುತ್ತದೆ” ಎಂಬ ಕರೆ ಬಂದ ಬಳಿಕ ಮಾತ್ರ ವಂಚನೆಯ ಪ್ರಮಾಣ ಶಾ ಅವರಿಗೆ ತಿಳಿಯಿತು. ಕಂಪೆನಿಗೆ ಭೇಟಿ ನೀಡಿದಾಗ ಕೋಟ್ಯಂತರ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿರುವುದು, ಅನಧಿಕೃತ ವಹಿವಾಟುಗಳು ನಡೆದಿದೆ ಮತ್ತು ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ ಎಂಬುದು ಪತ್ತೆಯಾಯಿತು.
ಆಸ್ತಿಗಳನ್ನು ಕಳೆದುಕೊಳ್ಳುವ ಭಯದಿಂದ ಶಾ ಅವರು ಉಳಿದ ಷೇರುಗಳನ್ನು ಮಾರಾಟ ಮಾಡಿ 35 ಕೋಟಿ ರೂಪಾಯಿಯನ್ನು ಪಾವತಿಸಿದರೂ, ನಂತರ ವೆಬ್‌ಸೈಟ್ ನಿಂದ ಸ್ಟೇಟ್ ಮೆಂಟ್ ಡೌನ್‌ಲೋಡ್ ಮಾಡಿದಾಗ ಕಂಪೆನಿ ಕಳುಹಿಸಿದ “ಲಾಭದ” ರಿಪೋರ್ಟ್ ಸುಳ್ಳು ಎಂದು ಕಂಡುಬಂದಿದೆ. NSE ಕಳುಹಿಸಿದ ಅನೇಕ ಸೂಚನೆಗಳಿಗೆ ಕಂಪೆನಿ ಶಾ ಅವರ ಹೆಸರಿನಲ್ಲಿ ಉತ್ತರಿಸಿದ್ದು, ಅದರ ಕುರಿತು ಅವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಅವರು ದೂರಿದ್ದಾರೆ.
ಈ ಸಂಬಂಧ ವನ್ರೈ ಪೊಲೀಸ್ ಠಾಣೆಯಲ್ಲಿ ಶಾ ಅವರ ದೂರು ಆಧರಿಸಿ IPC 409 (ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್) ಮತ್ತು 420 (ವಂಚನೆ) ಸೇರಿದಂತೆ ಹಲವು ಸೆಕ್ಷನ್‌ಗಳಡಿ FIR ದಾಖಲಾಗಿದೆ. ಪ್ರಕರಣವನ್ನು ಮುಂದಿನ ತನಿಖೆಗೆ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ಗೆ ಹಸ್ತಾಂತರಿಸಲಾಗಿದೆ.