×
Ad

ಕುನಾಲ್ ಕಾಮ್ರಾ ವಿವಾದ: ಸ್ಟಾಂಡ್-ಅಪ್‌ ಕಾಮಿಡಿಗಳಿಗೆ ಹೆಸರುವಾಸಿಯಾದ ಹ್ಯಾಬಿಟ್ಯಾಟ್ ಸ್ಟುಡಿಯೋ‌ ಮುಚ್ಚಲು ತೀರ್ಮಾನ

Update: 2025-03-24 14:35 IST

Photo credit: PTI

ಮುಂಬೈ: ಶಿವಸೇನಾ ಕಾರ್ಯಕರ್ತರು ಆವರಣವನ್ನು ಧ್ವಂಸ ಮಾಡಿದ ಬಳಿಕ ಸ್ಟಾಂಡ್-ಅಪ್ ಕಾಮಿಡಿ ಕಾರ್ಯಕ್ರಮಗಳಿಗೆ ಆದ್ಯತೆಯ ಸ್ಥಳವಾಗಿದ್ದ ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋ‌ ಮುಚ್ಚಲು ತೀರ್ಮಾನಿಸಿದೆ.

ಶಿವಸೇನೆ (ಶಿಂಧೆ ಬಣ) ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಗುರಿಯಾಗಿಸಿಕೊಂಡು ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಾಡಿದ ಹಾಸ್ಯಗಳನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಸ್ಟುಡಿಯೋ ಆವರಣವನ್ನು ಧ್ವಂಸ ಮಾಡಿದ್ದರು.

ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ದಿ ಹ್ಯಾಬಿಟ್ಯಾಟ್ ಸ್ಟುಡಿಯೋ, "ನಮ್ಮನ್ನು ಮತ್ತು ನಮ್ಮ ಆಸ್ತಿಯನ್ನು ಅಪಾಯಕ್ಕೆ ಸಿಲುಕಿಸದೆ ಮುಕ್ತ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸುವ ಅತ್ಯುತ್ತಮ ಮಾರ್ಗವನ್ನು ನಾವು ಕಂಡುಕೊಳ್ಳುವವರೆಗೆ, ಸ್ಟುಡಿಯೋವನ್ನು ಮುಚ್ಚಲು ನಿರ್ಧರಿಸಲಾಗಿದೆ” ಎಂದು ತಿಳಿಸಿದೆ.

"ನಮ್ಮನ್ನು ಗುರಿಯಾಗಿಸಿಕೊಂಡಿರುವ ಇತ್ತೀಚಿನ ವಿಧ್ವಂಸಕ ಕೃತ್ಯಗಳಿಂದ ನಾವು ಆಘಾತಕ್ಕೊಳಗಾಗಿದ್ದೇವೆ, ಚಿಂತಿತರಾಗಿದ್ದೇವೆ. ಕಲಾವಿದರು ತಮ್ಮ ಅಭಿಪ್ರಾಯಗಳು ಮತ್ತು ಸೃಜನಶೀಲ ಆಯ್ಕೆಗಳಿಗೆ ಮಾತ್ರ ಜವಾಬ್ದಾರರು. ಯಾವುದೇ ಕಲಾವಿದರು ಪ್ರದರ್ಶಿಸಿದ ವಿಷಯದಲ್ಲಿ ನಾವು ಎಂದಿಗೂ ಭಾಗಿಯಾಗಿಲ್ಲ, ಆದರೆ ಇತ್ತೀಚಿನ ಘಟನೆಗಳು ಪ್ರತಿ ಬಾರಿಯೂ ನಮ್ಮನ್ನು ಹೇಗೆ ದೂಷಿಸಲಾಗುತ್ತದೆ ಮತ್ತು ಗುರಿಯಾಗಿಸಿಕೊಳ್ಳಲಾಗುತ್ತದೆ ಎಂಬುದರ ಕುರಿತು ಪುನರ್ವಿಮರ್ಶಿಸುವಂತೆ ಮಾಡಿದೆ." ಎಂದು ಸ್ಟುಡಿಯೋ ಹೇಳಿದೆ.

ಈ ಹಿಂದೆ, ಸ್ಟುಡಿಯೋ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, “ಕುನಾಲ್ ಕಾಮ್ರಾ ಅವರ ಇತ್ತೀಚಿನ ವೀಡಿಯೊ ತಯಾರಿಕೆಯಲ್ಲಿ ಅದು ಭಾಗಿಯಾಗಿಲ್ಲ, ಹಾಗೂ ಅದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅನುಮೋದಿಸುವುದಿಲ್ಲ" ಎಂದು ಹೇಳಿತ್ತು.

ಅದಾಗ್ಯೂ, ಶಿವಸೇನಾ ಕಾರ್ಯಕರ್ತರು ಸ್ಟುಡಿಯೋದಲ್ಲಿ ಕ್ಯಾಮೆರಾಗಳು, ಲೈಟ್‌ ಗಳು ಮತ್ತು ಸ್ಪೀಕರ್‌ಗಳ ಮೇಲೆ ಕುರ್ಚಿಗಳನ್ನು ಎಸೆಯುತ್ತಿರುವ ದೃಶ್ಯಗಳು ವೈರಲ್‌ ಆಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News