×
Ad

ಝುಬೀನ್ ಗರ್ಗ್ ವ್ಯವಸ್ಥಾಪಕ, ಸಂಘಟಕನ ವಿರುದ್ಧ ಕೊಲೆ ಪ್ರಕರಣ: ಅಸ್ಸಾಂ ಪೊಲೀಸರು

Update: 2025-10-02 19:46 IST

ಝುಬೀನ್ ಗರ್ಗ್ | Photo Credit : PTI 

ಗುವಾಹಟಿ,ಅ.2: ಸಂಗೀತ ದಿಗ್ಗಜ ಜುಬೀನ್ ಗರ್ಗ್ ಅವರ ನಿಗೂಢ ಸಾವಿನ ಕುರಿತು ತನಿಖೆಯು ನಾಟಕೀಯ ತಿರುವನ್ನು ಪಡೆದುಕೊಂಡಿದೆ. ಸುದೀರ್ಘ ಸಮಯದಿಂದ ಗರ್ಗ್ ಅವರ ಮ್ಯಾನೇಜರ್ ಆಗಿದ್ದ ಸಿದ್ಧಾರ್ಥ ಶರ್ಮಾ ಮತ್ತು ಈಶಾನ್ಯ ಭಾರತ ಉತ್ಸವ(ಎನ್‌ಇಐಎಫ್)ದ ಸಂಘಟಕ ಶ್ಯಾಮಕಾನು ಮಹಂತ ಅವರನ್ನು ಗುರುಗ್ರಾಮ ಮತ್ತು ದಿಲ್ಲಿಯಲ್ಲಿ ಬಂಧಿಸಿದ ಪೋಲಿಸರು ಬುಧವಾರ ಅವರನ್ನು ಗುವಾಹಟಿಗೆ ಕರೆತಂದಿದ್ದಾರೆ.

ಸಾರ್ವಜನಿಕರ ಭಾರಿ ಆಕ್ರೋಶದ ಹಿನ್ನೆಲೆಯಲ್ಲಿ ಇಬ್ಬರನ್ನು ಭಾರೀ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ದ ಪೋಲಿಸರು ಕಾಮರೂಪ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದ್ದು,ಇಬ್ಬರಿಗೂ 14 ದಿನಗಳ ಪೋಲಿಸ್ ಕಸ್ಟಡಿ ವಿಧಿಸಲಾಗಿದೆ.

ಶರ್ಮಾ ಮತ್ತು ಮಹಂತ ಕೊಲೆಯಲ್ಲದ ದಂಡನೀಯ ನರಹತ್ಯೆ, ಕ್ರಿಮಿನಲ್ ಒಳಸಂಚು ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಇಂಟರ್‌ಪೋಲ್ ಎಚ್ಚರಿಕೆಯ ಮೇರೆಗೆ ದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯ ವಲಸೆ ಅಧಿಕಾರಿಗಳು ಸಿಂಗಾಪುರದಿಂದ ಮರಳಿದ ತಕ್ಷಣ ಮಹಂತ ಅವರನ್ನು ಬಂಧಿಸಿ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಅಸ್ಸಾಂ ಪೋಲಿಸರಿಗೆ ಹಸ್ತಾಂತರಿಸಿದ್ದರು. ಶರ್ಮಾರನ್ನು ಗುರುಗ್ರಾಮದಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ವಿಶೇಷ ಡಿಜಿಪಿ(ಸಿಐಡಿ) ಹಾಗೂ ವಿಶೇಷ ತನಿಖಾ ತಂಡದ ಮುಖ್ಯಸ್ಥ ಮುನ್ನಾ ಪ್ರಸಾದ ಗುಪ್ತಾ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ತನಿಖಾಧಿಕಾರಿಗಳು ತನಿಖೆಯಲ್ಲಿ ಮುಖ್ಯ ಪುರಾವೆಯಾಗಿರುವ ಗರ್ಗ್ ಅವರ ಮೊಬೈಲ್ ಫೋನ್‌ನ್ನು ಶರ್ಮಾ ಬಳಿಯಿಂದ ವಶಪಡಿಸಿಕೊಂಡಿದ್ದಾರೆ.

‘ಪ್ರಕರಣದಲ್ಲಿ ಅಂತಿಮ ಫಲಿತಾಂಶ ಬರಲಿದೆ, ನಮ್ಮಲ್ಲಿ ಭರವಸೆಯಿಡಿ ’ ಎಂದು ಅಸ್ಸಾಂ ಡಿಜಿಪಿ ಹರ್ಮೀತ್ ಸಿಂಗ್ ಹೇಳಿದರು.

ನಾಲ್ಕನೇ ಈಶಾನ್ಯ ಭಾರತ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರಕ್ಕೆ ತೆರಳಿದ್ದ ಗರ್ಗ್(52) ಅಲ್ಲಿ ಈಜುತ್ತಿದ್ದಾಗ ನಿಗೂಢವಾಗಿ ಮೃತಪಟ್ಟಿದ್ದರು. ಅವರ ಹಠಾತ್ ಸಾವು ಅವರ ಅಂತಿಮ ಕ್ಷಣಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಾರ್ವಜನಿಕರ ಆಕ್ರೋಶ ಮತ್ತು ಅಸ್ಸಾಂ ಸರಕಾರದ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ ಈ ಬಂಧನಗಳು ನಡೆದಿವೆ. ಶರ್ಮಾ,ಮಹಂತ ಮತ್ತು ಇತರರ ವಿರುದ್ಧ ರಾಜ್ಯಾದ್ಯಂತ 60ಕ್ಕೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿವೆ. ಸರಕಾರವು ಇಬ್ಬರಿಗೂ ಶರಣಾಗಲು ಅ.6ರ ಅಂತಿಮ ಗಡುವು ವಿಧಿಸಿತ್ತು.

ಈ ಬಂಧನಗಳು ಗರ್ಗ್ ಕುಟುಂಬಕ್ಕೆ ಕೊಂಚ ನೆಮ್ಮದಿಯನ್ನು ತಂದಿವೆ. ಜೋರ್ಹಾತ್‌ನಲ್ಲಿ ಉತ್ತರಕ್ರಿಯೆ ಸಂದರ್ಭದಲ್ಲಿ ಗರ್ಗ್ ಪತ್ನಿ ಗರೀಮಾ ಅವರು,‘ನನ್ನ ಪತಿಯ ಅಂತಿಮ ಕ್ಷಣಗಳಲ್ಲಿ ಅವರಿಗೆ ಏನಾಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ನಾವೆಲ್ಲರೂ ಬಯಸಿದ್ದೇವೆ. ತನಿಖೆಯು ಮುಂದುವರಿಯುತ್ತದೆ ಮತ್ತು ಸತ್ಯವು ಹೊರಬರುತ್ತದೆ ಎಂದು ನನಗೆ ವಿಶ್ವಾಸವಿದೆ. ನಮಗೆ ಶೀಘ್ರವೇ ನ್ಯಾಯ ದೊರಕುವ ಭರವಸೆಯಿದೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News