×
Ad

ಕಾಲೇಶ್ವರಂ ಯೋಜನೆಯಲ್ಲಿ ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ ವ್ಯಕ್ತಿಯ ಕೊಲೆ

Update: 2025-02-20 08:08 IST

ಕೆ ಚಂದ್ರಶೇಖರ್ ರಾವ್ (PTI) | ರಾಜಲಿಂಗಮೂರ್ತಿ (x.com)

ಹೈದರಾಬಾದ್: ಕಾಲೇಶ್ವರಂ ಯೋಜನೆಯ ಭಾಗವಾಗಿ ಮೇಡಿಗಡ್ಡ ಬ್ಯಾರೇಜ್ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಇತರರ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ ವ್ಯಕ್ತಿಯು, ಬುಧವಾರ ಜಯಶಂಕರ್ ಭೂಪಾಲಪಲ್ಲಿ ಪಟ್ಟಣದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಡಿಗಡ್ಡ ಬ್ಯಾರೇಜ್‌ ನ ಕೆಲವು ಕಂಬಗಳು ಮುಳುಗಿದ ನಂತರ, ಕೆಸಿಆರ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ರಾಜಲಿಂಗಮೂರ್ತಿ ಅವರು 2023 ಅಕ್ಟೋಬರ್ ನಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

50 ರ ಹರೆಯದ ಎನ್ ರಾಜಲಿಂಗಮೂರ್ತಿ ಎಂಬ ವ್ಯಕ್ತಿಯನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಭೂ ವಿವಾದಗಳಿಗೆ ಸಂಬಂಧಿಸಿದಂತೆ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ರಾಜಕೀಯದ ಕೈವಾಡವನ್ನು ಅವರು ನಿರಾಕರಿಸಿದ್ದಾರೆ.

ಬುಧವಾರ ಸಂಜೆ 7.30 ರ ಸುಮಾರಿಗೆ ಬೈಕ್ ನಲ್ಲಿ ಹೋಗುತ್ತಿದ್ದ ರಾಜಲಿಂಗಮೂರ್ತಿ ಅವರನ್ನು ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿ, ಅವರ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News