×
Ad

ಭಾರತದಲ್ಲಿ ಕಾರ್ಯಾಚರಣೆಗೆ ಬಾಹ್ಯಾಕಾಶ ಇಲಾಖೆಯ ಅಂತಿಮ ಅನುಮತಿ ಪಡೆದ ಮಸ್ಕ್ ಒಡೆತನದ ಸ್ಟಾರ್ ಲಿಂಕ್

Update: 2025-07-09 22:06 IST

ಎಲಾನ್ ಮಸ್ಕ್ | PC : PTI

ಹೊಸದಿಲ್ಲಿ: ಎಲಾನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಭಾರತದಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಬಾಹ್ಯಾಕಾಶ ಇಲಾಖೆಯಿಂದ ಪರವಾನಿಗೆಯನ್ನು ಸ್ವೀಕರಿಸಿದ್ದು,ಇದರೊಂದಿಗೆ ಅದು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಉಳಿದಿದ್ದ ಏಕೈಕ ನಿಯಂತ್ರಕ ಅಡಚಣೆ ನಿವಾರಣೆಯಾಗಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸ್ಟಾರ್ ಲಿಂಕ್ ಭಾರತದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಆರಂಭಿಸಲು ಪರವಾನಿಗೆಗಳಿಗಾಗಿ 2022ರಿಂದಲೂ ಕಾಯುತ್ತಿತ್ತು. ಕಳೆದ ತಿಂಗಳು ಅದು ಭಾರತದ ದೂರಸಂಪರ್ಕ ಇಲಾಖೆಯಿಂದ ಪ್ರಮುಖ ಪರವಾನಿಗೆಯನ್ನು ಪಡೆದುಕೊಂಡಿತ್ತು.ಆದರೆ ಬಾಹ್ಯಾಕಾಶ ಇಲಾಖೆಯಿಂದ ಹಸಿರು ನಿಶಾನೆಗಾಗಿ ಕಾಯುತ್ತಿತ್ತು.

ಸ್ಟಾರ್ ಲಿಂಕ್ ಬಾಹ್ಯಾಕಾಶ ಕ್ಷೇತ್ರವನ್ನು ಪ್ರವೇಶಿಸಲು ಭಾರತದಿಂದ ಅನುಮತಿ ಪಡೆದುಕೊಂಡಿರುವ ಮೂರನೇ ಕಂಪನಿಯಾಗಿದೆ. ಈ ಮೊದಲು ದೇಶದಲ್ಲಿ ಸೇವೆಗಳನ್ನು ಒದಗಿಸಲು ಯುಟೆಲ್ ಸ್ಯಾಟ್ ನ ಒನ್ ವೆಬ್ ಮತ್ತು ರಿಲಯನ್ಸ್ ಜಿಯೋ ಸಲ್ಲಿಸಿದ್ದ ಅರ್ಜಿಗಳಿಗೆ ಸರಕಾರವು ಅನುಮೋದನೆ ನೀಡಿತ್ತು.

ಸ್ಟಾರ್ ಲಿಂಕ್ ಈಗ ಸರಕಾರದಿಂದ ಸ್ಪೆಕ್ಟ್ರಂ ಪಡೆದುಕೊಳ್ಳಬೇಕಿದೆ ಮತ್ತು ತಳಮಟ್ಟದ ಮೂಲಸೌಕರ್ಯಗಳನ್ನು ಸ್ಥಾಪಿಸಬೇಕಿದೆ. ಜೊತೆಗೆ ತಾನು ಸಹಿ ಹಾಕಿರುವ ಭದ್ರತಾ ನಿಯಮಗಳಿಗೆ ಬದ್ಧನಾಗಿದ್ದೇನೆ ಎನ್ನುವುದನ್ನು ಪರೀಕ್ಷೆಗಳು ಮತ್ತು ಪ್ರಯೋಗಗಳ ಮೂಲಕ ಪ್ರದರ್ಶಿಸಬೇಕಿದೆ.

ಭಾರತವು ಉಪಗ್ರಹ ಸೇವೆಗಳಿಗೆ ಹೇಗೆ ಸ್ಪೆಕ್ಟ್ರಂ ಮಂಜೂರು ಮಾಡಬೇಕು ಎನ್ನುವ ಬಗ್ಗೆ ಮಸ್ಕ್ ಮತ್ತು ಮುಕೇಶ ಅಂಬಾನಿಯವರ ಜಿಯೋ ತಿಂಗಳುಗಳ ಕಾಲ ಕಚ್ಚಾಟದಲ್ಲಿ ತೊಡಗಿದ್ದವು. ಸ್ಪೆಕ್ಟ್ರಂ ಅನ್ನು ನಿಯೋಜಿಸಬೇಕು. ಅದನ್ನು ಹರಾಜು ಮಾಡಬಾರದು ಎಂಬ ಮಸ್ಕ್ ನಿಲುವನ್ನು ಭಾರತ ಸರಕಾರವು ಬೆಂಬಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News