ಮುಸ್ಲಿಂ ವಿದ್ವಾಂಸ ಶಬ್ಬೀರ್ ಅಹ್ಮದ್ ಅವರ ಬಂಧನ ಸೇಡಿನ ಕ್ರಮ : ಸಂಸದ ಚಂದ್ರಶೇಖರ್ ಆಝಾದ್
Photo | maktoobmedia
ಲಕ್ನೋ : ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿರುವ ಅಲ್ಫಾರೂಕ್ ಇಂಟರ್ ಕಾಲೇಜಿನ ವ್ಯವಸ್ಥಾಪಕ, ಮುಸ್ಲಿಂ ವಿದ್ವಾಂಸ ಮೌಲಾನಾ ಶಬ್ಬೀರ್ ಅಹ್ಮದ್ ಅವರ ಬಂಧನವನ್ನು ಭೀಮ್ ಆರ್ಮಿ ಮುಖ್ಯಸ್ಥ, ಸಂಸದ ಚಂದ್ರಶೇಖರ್ ಆಝಾದ್ ಖಂಡಿಸಿದ್ದಾರೆ. ಇದು ಸೇಡಿನ ಕ್ರಮ ಎಂದು ಹೇಳಿದ್ದಾರೆ.
ಶಬ್ಬೀರ್ ಅಹ್ಮದ್ ಅವರ ಬಂಧನ ರಾಜಕೀಯ ಪ್ರೇರಿತವಾಗಿದೆ. ಬಂಧನದ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಧಾರ್ಮಿಕ ಶಿಕ್ಷಣ ಮತ್ತು ಕೋಮು ಸಾಮರಸ್ಯವನ್ನು ಉತ್ತೇಜಿಸುತ್ತಿರುವ ವ್ಯಕ್ತಿಗೆ ಕಿರುಕುಳ ನೀಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚಂದ್ರಶೇಖರ್ ಆಝಾದ್, ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಇಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರ್ಮಿಕ ಶಿಕ್ಷಣ, ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದತೆಯ ಸಂಕೇತವಾದ ಅಲ್ಫಾರುಕ್ ಇಂಟರ್ ಕಾಲೇಜಿನ ವ್ಯವಸ್ಥಾಪಕ ಮೌಲಾನಾ ಶಬ್ಬೀರ್ ಅಹ್ಮದ್ ಸಾಹಬ್ ಅವರನ್ನು ನಾಲ್ಕು ವರ್ಷಗಳ ಹಳೆಯ ಪ್ರಕರಣದಲ್ಲಿ ಬಂಧಿಸಿರುವುದು ಆತಂಕಕಾರಿ ಪೂರ್ವನಿದರ್ಶನವಾಗಿದೆ ಎಂದು ಹೇಳಿದ್ದಾರೆ.
ದೂರುದಾರ 2020ರಲ್ಲಿ ಕಾಲೇಜಿಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ, ಆತನನ್ನು ನೇಮಕಾತಿ ಮಾಡಿರಲಿಲ್ಲ. ಅದೇ ವ್ಯಕ್ತಿ ಈಗ 2025ರಲ್ಲಿ ಇದ್ದಕ್ಕಿದ್ದಂತೆ ಮೌಲಾನಾ ಅವರ ಮೇಲೆ ಯಾವುದೇ ಪುರಾವೆಯಿಲ್ಲದೆ ಧಾರ್ಮಿಕ ಮತಾಂತರದ ಆರೋಪ ಹೊರಿಸಿದ್ದಾನೆ. ಬಿಜೆಪಿ ನಾಯಕರ ಆದೇಶದ ಮೇರೆಗೆ, ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಮೌಲಾನಾ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ನಮ್ಮ ಪ್ರಶ್ನೆ ಏನೆಂದರೆ, 2020ರ ಪ್ರಕರಣದಲ್ಲಿ ಇಲ್ಲಿಯವರೆಗೆ ಏಕೆ ದೂರು ನೀಡಿಲ್ಲ? ಇದು ಧಾರ್ಮಿಕ ವಿಷಯವೇ ಅಥವಾ ವೈಯಕ್ತಿಕ ದ್ವೇಷ ಮತ್ತು ಸೇಡಿನ ಹಿಂದಿನ ಪಿತೂರಿಯೇ? ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಮೌಲಾನಾ ಅವರನ್ನು ಬಂಧಿಸಬಾರದು. ನಿರಪರಾಧಿ ವ್ಯಕ್ತಿಯನ್ನು ಬಂಧಿಸಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಿಲ್ಲಿಸಿ ಎಂದು ಚಂದ್ರ ಶೇಖರ್ ಆಝಾದ್ ಆಗ್ರಹಿಸಿದ್ದಾರೆ.