×
Ad

ಮುಸ್ಲಿಮರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ; ಇದು ಅಸ್ಸಾಮಿ ಜನರ ಶರಣಾಗತಿ ಪ್ರಾರಂಭವಾಗುವ ಸೂಚನೆ: ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಹಿಮಂತ ಬಿಸ್ವ ಶರ್ಮಾ

Update: 2025-11-10 12:02 IST

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (File Photo: PTI)

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆಯ ಜೊತೆಗೆ ಆರ್ಥಿಕ ಬದಲಾವಣೆಯೂ ಸಕ್ರಿಯವಾಗಿದೆ. ಮುಸ್ಲಿಮರು ಹೆಚ್ಚಾಗಿ ಶ್ರೀಮಂತರಾಗುತ್ತಿದ್ದಾರೆ, ಇದು ಅಸ್ಸಾಮಿ ಜನರ ಶರಣಾಗತಿಯ ಪ್ರಾರಂಭವಾಗುವ ಸೂಚನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರವಿವಾರ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಾ, “2001ರಿಂದ 2011ರವರೆಗೆ ನಡೆದ ಜನಗಣತಿಯ ಅಂಕಿಅಂಶಗಳು ಸ್ಪಷ್ಟವಾಗಿ ಅಸ್ಸಾಂನ ಪ್ರತಿಯೊಂದು ಬ್ಲಾಕ್‌ನಲ್ಲಿ ಹಿಂದೂ ಜನಸಂಖ್ಯೆಯ ವೃದ್ಧಿ ಕುಂಠಿತವಾಗಿದೆ, ಆದರೆ ಮುಸ್ಲಿಂ ಜನಸಂಖ್ಯೆ ವೇಗವಾಗಿ ಏರಿದೆ ಎಂದು ಹೇಳಿವೆ” ಎಂದರು.

“ಇದು ಕೇವಲ ಜನಸಂಖ್ಯಾ ಬದಲಾವಣೆಯಷ್ಟೇ ಅಲ್ಲ, ಆರ್ಥಿಕ ಬದಲಾವಣೆಯೂ ಆಗಿದೆ. ಮುಸ್ಲಿಮರು ಹೆಚ್ಚು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಾರೆ. ಸಂಪತ್ತಿನ ಮಾದರಿಯೇ ಬದಲಾಗುತ್ತಿದೆ. ಇದು ಅಸ್ಸಾಮಿ ಜನರ ಶರಣಾಗತಿಯ ಹೊಸ ಅಧ್ಯಾಯದ ಪ್ರಾರಂಭ,” ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಅಭಿಪ್ರಾಯಪಟ್ಟರು.

ಕಳೆದ ವರ್ಷ ಅಸ್ಸಾಂ ಸರ್ಕಾರ ಹೊರಡಿಸಿದ ಹೊಸ ನಿರ್ದೇಶನದ ಪ್ರಕಾರ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ನಡೆಯುವ ಭೂಮಿಯ ಖರೀದಿ ಮಾರಾಟಕ್ಕೆ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. “ಹಿಂದೂಗಳಿಂದ ಮುಸ್ಲಿಮರಿಗೆ ಭೂಮಿಯ ಮಾರಾಟದ ಪ್ರಮಾಣ ತುಂಬಾ ಹೆಚ್ಚಿದೆ, ಆದರೆ ಅದಕ್ಕೆ ಪ್ರತಿಯಾಗಿ ನಡೆಯುವ ವ್ಯವಹಾರಗಳು ತುಂಬಾ ಕಡಿಮೆ,” ಎಂದು ಅವರು ತಿಳಿಸಿದ್ದಾರೆ.

ಆದರೆ, “ಈ ಮಾರಾಟಗಳಲ್ಲಿ ಹೆಚ್ಚಿನವರು ಅಸ್ಸಾಮಿಗಳು ಮತ್ತು ಸ್ಥಳೀಯ ಮುಸ್ಲಿಮರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅದರಲ್ಲಿ ಯಾವುದೇ ಆಕ್ಷೇಪವಿಲ್ಲ,” ಎಂದು ಶರ್ಮಾ ಸ್ಪಷ್ಟಪಡಿಸಿದರು.

ಈ ನಿಯಮದಿಂದ ಸರ್ಕಾರಕ್ಕೆ ಈಗ ನಿಖರ ಅಂಕಿಅಂಶಗಳು ಲಭ್ಯವಾಗುತ್ತಿದೆ. ಹಿಂದೆ ನಾವು ಸಂಖ್ಯೆಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೆವು. ಈಗ ಆರ್ಥಿಕ ಬದಲಾವಣೆಯ ನಿಜವಾದ ಚಿತ್ರಣ ಹೊರಬರುತ್ತಿದೆ. ಜನಸಂಖ್ಯಾ ಬದಲಾವಣೆಯನ್ನು ಕೆಲವೊಮ್ಮೆ ಸ್ವೀಕರಿಸಬಹುದು, ಆದರೆ ಆರ್ಥಿಕ ಬದಲಾವಣೆ ಸಂಪೂರ್ಣ ವಿನಾಶದ ಸೂಚನೆ ಎಂದು ಸಿಎಂ ಎಚ್ಚರಿಕೆ ನೀಡಿದರು.

ಈ ಕುರಿತು ಶೀಘ್ರದಲ್ಲೇ ವಿವರವಾದ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವೆ ಎಂದು ಶರ್ಮಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News