×
Ad

ಪಹಲ್ಗಾಮ್ ದಾಳಿಗೂ ಮುಂಚೆಯೇ ನನ್ನ ಚಿತ್ರದ ಚಿತ್ರೀಕರಣ ನಡೆದಿತ್ತು, ಕ್ರಿಕೆಟ್ ಈಗ ನಡೆಯುತ್ತಿದೆ: 'ಸರ್ದಾರ್ಜಿ 3' ಬಗ್ಗೆ ಮೊದಲ ಬಾರಿಗೆ ಮಾತನಾಡಿದ ದಿಲ್ಜಿತ್ ದೋಸಾಂಜ್

Update: 2025-09-26 00:02 IST

ಕೌಲಾಲಂಪುರ್: ಪಂಜಾಬಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ತಮ್ಮ 'ಸರ್ದಾರ್ಜಿ 3' ಚಿತ್ರ ಹಾಗೂ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಸುತ್ತಲಿನ ವಿವಾದದ ಕುರಿತು ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ಮಲೇಶ್ಯಾದಲ್ಲಿ ನಡೆದ ಸಂಗೀತ ಕಚೇರಿಯ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸ್ಮರಿಸಿ ಸಂತಾಪ ಸೂಚಿಸಿದರು. ಆ ದಾಳಿಯಲ್ಲಿ 26 ಮಂದಿ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದರು.

ದೋಸಾಂಜ್, ಸರ್ದಾರ್ಜಿ 3 ಚಿತ್ರವನ್ನು ಫೆಬ್ರವರಿಯಲ್ಲೇ ಪಹಲ್ಗಾಮ್ ದಾಳಿಗಿಂತ ಮುಂಚೆ ಪೂರ್ಣಗೊಳಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.

“ಪಹಲ್ಗಾಮ್ ದುರಂತದ ನಂತರ ನಾವು ಭಯೋತ್ಪಾದಕರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಪ್ರಾರ್ಥಿಸುತ್ತಲೇ ಇದ್ದೇವೆ. ನನ್ನ ಚಿತ್ರ ದಾಳಿಗಿಂತ ಮುಂಚೆ ಚಿತ್ರೀಕರಿಸಲ್ಪಟ್ಟಿತು, ಆದರೆ ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯವು ದಾಳಿಯ ನಂತರ ನಡೆಯಿತು,” ಎಂದು ಅವರು ವಿವರಿಸಿದರು.

ಈ ವೇಳೆ ವೇದಿಕೆಯಲ್ಲಿ ಭಾರತೀಯ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುತ್ತಿರುವ ಅವರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. “ಅದು ನನ್ನ ದೇಶದ ಧ್ವಜ, ಸದಾ ಗೌರವಿಸಿ,” ಎಂದು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 14ರಂದು ಏಷ್ಯಾ ಕಪ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ ಗಳಿಂದ ಜಯಗಳಿಸಿತು. ಆದರೆ ಪಂದ್ಯದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಶುಭಾಶಯ ವಿನಿಮಯ ನಿರಾಕರಿಸಿದ್ದು, ದ್ವಿಪಕ್ಷೀಯ ಸಂಬಂಧಗಳ ಹದಗೆಟ್ಟ ಸ್ಥಿತಿಯನ್ನು ಉಲ್ಲೇಖಿಸಿತು.

ತಮ್ಮನ್ನು “ರಾಷ್ಟ್ರವಿರೋಧಿ” ಎಂದು ಕೆಲ ಮಾಧ್ಯಮಗಳು ಆರೋಪಿಸಿದ್ದಕ್ಕೆ ದೋಸಾಂಜ್ ಅಸಮಾಧಾನ ವ್ಯಕ್ತಪಡಿಸಿದರು. “ಪಂಜಾಬಿಗಳು ಹಾಗೂ ಸಿಖ್ ಸಮುದಾಯ ದೇಶದ ವಿರುದ್ಧ ಎಂದಿಗೂ ಹೋಗುವುದಿಲ್ಲ. ಮಾಧ್ಯಮಗಳು ತಪ್ಪು ಚಿತ್ರಣ ನೀಡಲು ಪ್ರಯತ್ನಿಸಿದವು,” ಎಂದು ಅವರು ಟೀಕಿಸಿದರು. “ನಾನು ಉತ್ತರಿಸಬಹುದಿತ್ತು. ನನ್ನಲ್ಲೂ ಹಲವಾರು ಉತ್ತರಗಳಿದ್ದರೂ ನಾನು ಮೌನವನ್ನು ಆರಿಸಿಕೊಂಡೆ. ಯಾರು ಏನೇ ಹೇಳಿದರೂ, ನಿಮ್ಮ ಮಾತಿನಲ್ಲಿ ದ್ವೇಷ ತುಂಬಿರಬಾರದು ಎಂಬುದನ್ನು ಜೀವನದಿಂದ ನಾನು ಕಲಿತಿದ್ದೇನೆ,” ಎಂದು ಅವರು ಅಭಿಮಾನಿಗಳಿಗೆ ತಿಳಿಸಿದರು.

ಜೂನ್ 27ರಂದು ವಿದೇಶಗಳಲ್ಲಿ ಬಿಡುಗಡೆಯಾದ ಸರ್ದಾರ್ಜಿ 3 ಚಿತ್ರದಲ್ಲಿ, ದೋಸಾಂಜ್ ಅವರು ಹನಿಯಾ ಆಮಿರ್ ಅವರೊಂದಿಗೆ ಅಭಿನಯಿಸಿದ್ದರು. ಅಮರ್ ಹುಂಡಾಲ್ ನಿರ್ದೇಶನದ ಈ ಚಿತ್ರದಲ್ಲಿ ನೀರು ಬಜ್ವಾ, ಗುಲ್ಶನ್ ಗ್ರೋವರ್ ಮತ್ತು ಸಪ್ನಾ ಪಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತವು ಮೇ 7ರಂದು “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿಗಳನ್ನು ನಡೆಸಿತ್ತು.

ಬಳಿಕ ಫವಾದ್ ಖಾನ್, ಮಹಿರಾ ಖಾನ್, ಅಲಿ ಜಾಫರ್, ಅತಿಫ್ ಅಸ್ಲಾಂ, ರಹತ್ ಫತೇಹ್ ಅಲಿ ಖಾನ್ ಹಾಗೂ ಹನಿಯಾ ಆಮಿರ್ ಸೇರಿದಂತೆ ಪಾಕಿಸ್ತಾನಿ ಕಲಾವಿದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News