×
Ad

ಹೂಳು ತುಂಬಿದ ಕೊಳದಿಂದ ಹೊರಬರಲಾಗದೆ ಒದ್ದಾಡಿದ ನಾಗಾಲ್ಯಾಂಡ್ ಸಚಿವ

Update: 2024-02-10 19:30 IST

ಕೊಹಿಮಾ (ನಾಗಾಲ್ಯಾಂಡ್): ನಾಗಾಲ್ಯಾಂಡಿನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೇಮ್ಜೆನ್ ಇಮ್ನಾ ಅಲಾಂಗ್ ತಮ್ಮ ಕಚಗುಳಿ ಇಡುವ ಹಾಸ್ಯ ಹಾಗೂ ರಂಜನೀಯ ಸಾಮಾಜಿಕ ಮಾಧ್ಯಮ ಶೀರ್ಷಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನಿಯಮಿತವಾಗಿ ತಮ್ಮ ಹಿಂಬಾಲಕರಿಗೆ ಜೀವನ ಸಲಹೆ ಹಾಗೂ ಹೃದಯವನ್ನು ಬೆಚ್ಚಗಾಗಿಸುವ ವಿಡಿಯೊಗಳನ್ನೂ ಪೋಸ್ಟ್ ಮಾಡುತ್ತಿರುತ್ತಾರೆ. ಈ ಬಾರಿ ಅವರು ತಮ್ಮ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ವಿಡಿಯೊವೊಂದನ್ನು ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಆ ಪೋಸ್ಟ್ ನಲ್ಲಿ ತಮಗೆ ಮೂವರು ವ್ಯಕ್ತಿಗಳು ಹೂಳು ತುಂಬಿದ ಕೊಳದಿಂದ ಹೊರ ಬರಲು ನೆರವು ನೀಡುತ್ತಿದ್ದರೂ, ತಾವು ಹೊರಬರಲಾಗದೆ ಒದ್ದಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಕಾರನ್ನು ಖರೀದಿಸುವ ಮುನ್ನ ವಾಹನದ ಸುರಕ್ಷತಾ ಮಾನದಂಡಗಳ ಮೌಲ್ಯಾಂಕದ ಬಗ್ಗೆ ತಿಳಿದುಕೊಳ್ಳಲು ಕಾರಿನ ಎನ್ಸಿಎಪಿ(ನೂತನ ಕಾರಿನ ಮೌಲ್ಯಮಾಪನ ಕಾರ್ಯಕ್ರಮಗಳು)ಯನ್ನು ಪರಿಶೀಲಿಸುವಂತೆ ಜನರಿಗೆ ಸಲಹೆ ನೀಡಲು ಅವರು ತಮ್ಮ ಈ ತಮಾಷೆಯ ಪೋಸ್ಟ್ ಅನ್ನು ಬಳಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.

“ಇಂದು ಜೆಸಿಬಿಯ ಪರೀಕ್ಷೆಯಿತ್ತು. ಇದೆಲ್ಲ ಎನ್ಸಿಎಪಿ ಮೌಲ್ಯದ ಕುರಿತಾಗಿದೆ. ವಾಹನವನ್ನು ಖರೀದಿಸುವುದಕ್ಕೂ ಮುನ್ನ ಖಂಡಿತವಾಗಿ ಎನ್ಸಿಎಪಿ ಮೌಲ್ಯಾಂಕವನ್ನು ಪರಿಶೀಲಿಸಿ. ಯಾಕೆಂದರೆ, ಇದು ನಿಮ್ಮ ಜೀವದ ಪ್ರಶ್ನೆಯಾಗಿದೆ” ಎಂದು ಇಮ್ನಾ ತಮ್ಮ ಪೋಸ್ಟ್ ಗೆ ಶೀರ್ಷಿಕೆ ನೀಡಿದ್ದಾರೆ.

ಇಮ್ನಾ ಹಂಚಿಕೊಂಡಿರುವ ವಿಡಿಯೊ ತುಣುಕಿನಲ್ಲಿ, ಇಮ್ನಾ ಅಲಾಂಗ್ ಹೂಳು ತುಂಬಿದ ಕೊಳದಿಂದ ಹೊರ ಬರಲು ಒದ್ದಾಡುತ್ತಿರುತ್ತಾರೆ. ಅವರನ್ನು ಹಿಂದೆಯಿಂದ ಒಬ್ಬರು ನೂಕುತ್ತಿದ್ದರೆ, ಮುಂದಿನಿಂದ ಇಬ್ಬರು ಅವರನ್ನು ಮೇಲಕ್ಕೆ ಎಳೆಯಲು ಪ್ರಯತ್ನಿಸುತ್ತಿರುತ್ತಾರೆ. ಹೀಗಿದ್ದೂ, ಸಚಿವ ಇಮ್ನಾ ಒದ್ದೆಯಾಗಿರುವ ಕೆಸರಿಗೆ ಜಾರುತ್ತಿರುತ್ತಾರೆ. ನಂತರ ಅವರು ಮಧ್ಯದಲ್ಲೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದರೆ, ಮತ್ತಷ್ಟು ಪ್ರಯತ್ನಗಳ ನಂತರ ಅವರು ಕೊಳದಿಂದ ಹೊರ ಬಂದು, ತಮಗೆ ನೆರವು ನೀಡಿದ ಜನರಿಗೆ ಧನ್ಯವಾದ ಸಲ್ಲಿಸುತ್ತಾರೆ.

ಇಮ್ನಾರ ಈ ತಮಾಷೆಯ ವೀಡಿಯೊ ಕೇವಲ ಕೆಲವೇ ಗಂಟೆಗಳಲ್ಲಿ 1,14,000ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದ್ದು, 8,000ಕ್ಕೂ ಹೆಚ್ಚು ಮೆಚ್ಚುಗೆಯನ್ನೂ ಗಿಟ್ಟಿಸಿದೆ.

ಪ್ರತಿಕ್ರಿಯೆಯ ವಿಭಾಗದಲ್ಲಿ ಓರ್ವ ಬಳಕೆದಾರ, “ನಮ್ಮ ದೇಶಕ್ಕೆ ಇಂತಹ ರಾಜಕಾರಣಿಗಳ ಅಗತ್ಯವಿದೆ. ವಿಡಿಯೊವನ್ನು ನೋಡುತ್ತಿದ್ದರೆ, ನಿಮಗೆ ಒಂದು ಕ್ಷಣವೂ ಅವರು ಭಾರತದ ದೊಡ್ಡ ರಾಜಕಾರಣಿ ಎಂಬ ಭಾವನೆ ಬರುವುದಿಲ್ಲ. ಬದಲಿಗೆ, ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಜನರೊಂದಿಗೆ ಸಂಭ್ರಮ ಪಡುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಿ. ಅಂತಹ ನಿರಹಂಕಾರಿ ನಾಯಕ ಇಮ್ನಾ ಅಲಾಂಗ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಇದು ಹೇಳುವುದು ತಪ್ಪಾಗಿದ್ದರೂ, ನೀವು ಪರಿಶುದ್ಧ ಪ್ರೀತಿ! ನಾನು ಈ ದಿನ ನೋಡಿದ ಅತ್ಯಂತ ಸಿಹಿಯಾದ ಸಂಗತಿಯಿದು’ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇಮ್ನಾ ಅಲಾಂಗ್ ಸಕ್ರಿಯ ಸಾಮಾಜಿಕ ಬಳಕೆದಾರರಾಗಿದ್ದಾರೆ. ಅವರು ಕಳೆದ ವರ್ಷ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ತಾವು ನೀಡಿದ್ದ ಉಡುಗೊರೆಯ ಚಿತ್ರವನ್ನು ಹಂಚಿಕೊಂಡಿದ್ದರು. ಆ ತಮಾಷೆಯ ಪೋಸ್ಟ್ ಕೂಡಾ ಸಾಕಷ್ಟು ವೈರಲ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News