×
Ad

ನೀಟ್-ಯುಜಿ 2004 ಪರಿಷ್ಕೃತ ಫಲಿತಾಂಶ | ಟಾಪರ್ ಮಝಿನ್ ಮನ್ಸೂರ್‌ರ ಕೌನ್ಸ್‌ ಲಿಂಗ್‌ ರ‍್ಯಾಂಕ್‌ ಏರಿಕೆ

Update: 2024-07-27 21:44 IST

 ಮಝಿನ್ ಮನ್ಸೂರ್‌ | PC : Youtube

ಹೊಸದಿಲ್ಲಿ : ನೀಟ್-ಯುಜಿ 2024 ಪರೀಕ್ಷೆಯಲ್ಲಿ 720ಕ್ಕೆ 720 ಅಂಕಗಳನ್ನು ಗಳಿಸಿರುವ ಟಾಪರ್ ಮಝಿನ್ ಮನ್ಸೂರ್ ಅವರು ಇತ್ತೀಚಿಗೆ ಪ್ರಕಟಗೊಂಡ ಪರಿಷ್ಕೃತ ಫಲಿತಾಂಶಗಳಲ್ಲಿ ತನ್ನ ರ್ಯಾಂಕ್‌ ನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು ಶೇ.99.997129 ಶೇಕಡಾವಾರು ಪ್ರಮಾಣವನ್ನು ಗಳಿಸುವ ಮೂಲಕ ಇತರ 16 ಅಭ್ಯರ್ಥಿಗಳೊಂದಿಗೆ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಜೂ.4ರ ಫಲಿತಾಂಶದಲ್ಲಿ ಕೌನ್ಸ್ ಲಿಂಗ್‌ಗಾಗಿ ಅವರ ಅಖಿಲ ಭಾರತ ರ್ಯಾಂ ಕ್‌ 1.05 ಆಗಿದ್ದರೆ ಈಗ ಅದು 1.03ಕ್ಕೆ ಸುಧಾರಣೆಗೊಂಡಿದೆ.

ಇದು 18ರ ಹರೆಯದ ಮನ್ಸೂರ್ ಅವರ ಮೊದಲ ನೀಟ್-ಯುಜಿ ಪ್ರಯತ್ನವಾಗಿತ್ತು. ಅವರು ವೈದ್ಯರ ಕುಟುಂಬಕ್ಕೆ ಸೇರಿದ್ದು, ಅವರ ತಂದೆ ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿದ್ದಾರೆ. ಮನ್ಸೂರ್ ಅವರ ಸೋದರಮಾವ ಮತ್ತು ಅತ್ತೆ, ತಂದೆಯ ತಂದೆ ಮತ್ತು ತಾಯಿಯ ತಂದೆ ಎಲ್ಲರೂ ವೈದ್ಯರಾಗಿದ್ದಾರೆ. ಮನ್ಸೂರ್ ಸೋದರ ಕೂಡ ದರ್ಭಂಗಾದ ಸರ್ಜುಗ್ ಡೆಂಟಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದಾರೆ. ತಾನೂ ಎಂಬಿಬಿಎಸ್ ಮಾಡಬೇಕು ಮತ್ತು ಅವರಂತಾಗಬೇಕು ಎಂಬ ಪ್ರೇರಣೆ ನೀಟ್-ಯುಜಿಗೆ ಹಾಜರಾಗುವ ಮನ್ಸೂರ್ ನಿರ್ಧಾರಕ್ಕೆ ಕಾರಣವಾಗಿತ್ತು.

ಕುತೂಹಲಕಾರಿಯಾಗಿ, ಸಿಬಿಎಸ್‌ಇ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮಕ್ಕೆ ಅನುಗುಣವಾಗಿರುತ್ತದೆ ಎಂದು ಹೇಳಲಾಗಿದ್ದರೂ ಮನ್ಸೂರ್ 10ನೇ ತರಗತಿಯಲ್ಲಿ ಸಿಬಿಎಸ್‌ಇ ಶಾಲೆಯನ್ನು ತೊರೆದು ಬಿಹಾರ ಶಾಲಾ ಶಿಕ್ಷಣ ಮಂಡಳಿ (ಬಿಎಸ್‌ಇಬಿ) ಪಠ್ಯಕ್ರಮದ ಶಾಲೆಯನ್ನು ಸೇರಿದ್ದರು. ಬಿಎಸ್‌ಇಬಿ ಪರೀಕ್ಷೆಗೆ ಸಿದ್ಧತೆ ಅವರ ಪಾಲಿಗೆ ಹೊರೆಯಾಗಿರಲಿಲ್ಲ. 2024ನೇ ಸಾಲಿನ ಬಿಎಸ್‌ಇಬಿ 12ನೇ ತರಗತಿಯ ಪರೀಕ್ಷೆಯಲ್ಲಿ ಅವರು ಶೇ.87ರಷ್ಟು ಅಂಕಗಳನ್ನು ಗಳಿಸಿದ್ದರು.

‘ಬಿಎಸ್‌ಇಬಿಯ ಅಂತಿಮ ಪರೀಕ್ಷೆಗಳಲ್ಲಿ ಪ್ರ್ಯಾಕ್ಟಿಕಲ್‌ಗಳು ಇರುವುದಿಲ್ಲ. ಆದರೆ ಸಿಬಿಎಸ್‌ಇ ವಿದ್ಯಾರ್ಥಿಗಳು ಪ್ರತಿ ವಿಷಯಕ್ಕೂ ಪ್ರ್ಯಾಕ್ಟಿಕಲ್‌ಗಳು ಮತ್ತು ಅಸೈನ್‌ಮೆಂಟ್‌ಗಳನ್ನು ಸಲ್ಲಿಸುವುದು ಅಗತ್ಯವಾಗಿದೆ. ದೀರ್ಘಾವಧಿಯಲ್ಲಿ ಬೋರ್ಡ್ ಪರೀಕ್ಷೆ ಅಂಕಗಳಿಗೆ ಮಹತ್ವವಿರುವುದಿಲ್ಲ ಎನ್ನುವುದು ನನಗೆ ತಿಳಿದಿತ್ತು. ನೀಟ್-ಯುಜಿ ಪರೀಕ್ಷೆಗೆ ಮುನ್ನ ಪ್ರ್ಯಾಕ್ಟಿಕಲ್‌ಗಳು ಮತ್ತು ಅಸೈನ್‌ಮೆಂಟ್‌ಗಳ ಹೆಚ್ಚುವರಿ ಹೊರೆಯನ್ನು ಹೊರಲು ನಾನು ಬಯಸಿರಲಿಲ್ಲ ’ ಎಂದು ಬಿಹಾರದ ದರ್ಭಂಗಾ ನಿವಾಸಿ ಮನ್ಸೂರ್ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News