×
Ad

ನೇಪಾಳದ ಜೈಲುಗಳಿಂದ ತಪ್ಪಿಸಿಕೊಂಡು ಭಾರತ ಪ್ರವೇಶಿಸಿದ್ದ 60 ಕೈದಿಗಳ ಬಂಧನ

Update: 2025-09-11 22:16 IST
PC : PTI 

ಹೊಸದಿಲ್ಲಿ, ಸೆ.11: ನೇಪಾಳದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭ ಅಲ್ಲಿನ ವಿವಿಧ ಜೈಲುಗಳಿಂದ ತಪ್ಪಿಸಿಕೊಂಡು ಅಕ್ರಮವಾಗಿ ಭಾರತ ಪ್ರವೇಶಿಸಿದ 60 ಮಂದಿ ಕೈದಿಗಳನ್ನು ಶಸಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಉತ್ತರಪ್ರದೇಶ, ಬಿಹಾರ್ ಹಾಗೂ ಪಶ್ಚಿಮಬಂಗಾಳ ಸೇರಿದಂತೆ ಭಾರತ-ನೇಪಾಳ ಗಡಿಯ ವಿವಿಧ ತಪಾಸಣಾ ಕೇಂದ್ರಗಳಿಂದ ಕಳೆದ ಎರಡು ದಿನಗಳಲ್ಲಿ ಈ ಕೈದಿಗಳನ್ನು ಎಸ್‌ಎಸ್‌ಬಿ ಪಡೆಗಳು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲರನ್ನೂ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಹಾಗೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಪೂರ್ವ ಭಾಗದಲ್ಲಿರುವ 1,751 ಕಿ.ಮೀ. ಉದ್ದದ ಬೇಲಿ ಇಲ್ಲದ ಭಾರತ ನೇಪಾಳ ಮುಂಚೂಣಿ ಪ್ರದೇಶವನ್ನು ಶಸಸ್ತ್ರ ಸೀಮಾ ಬಲ ಕಾಯುತ್ತಿದೆ. ಭೂತಾನ್‌ನೊಂದಿಗಿನ ಭಾರತದ ಗಡಿಯನ್ನು ಕೂಡ ಭದ್ರತಾ ಪಡೆ ಕಾಯುತ್ತಿದೆ.

ಈ ವಾರದ ಆರಂಭದಲ್ಲಿ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದು, ಅಲ್ಲಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ರಾಜೀನಾಮೆ ನೀಡಲು ಕಾರಣವಾದ ಬಳಿಕ ಭಾರತದ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

ಬಂಧಿತ ಕೈದಿಗಳಲ್ಲಿ ಇಬ್ಬರು ಅಥವಾ ಮೂವರು ಭಾರತೀಯ ಮೂಲದವರು ಎಂದು ಹೇಳಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಸಸ್ತ್ರ ಸೀಮಾ ಬಲ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅದು ಸುಮಾರು 50 ಬೇಟಾಲಿಯನ್‌ಗಳು ಅಥವಾ ಸುಮಾರು 60 ಸಾವಿರ ಸಿಬ್ಬಂದಿಯನ್ನು ನೇಪಾಳದೊಂದಿಗೆ ಮುಂಚೂಣಿ ಪ್ರದೇಶವನ್ನು ಹಂಚಿಕೊಂಡಿರುವ ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ಪಶ್ಚಿಮಬಂಗಾಳ ಹಾಗೂ ಸಿಕ್ಕಿಂನಲ್ಲಿ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News