×
Ad

ತಂಬಾಕು, ಪಾನ್ ಮಸಾಲಾ ಮೇಲೆ ಹೊಸ ಸೆಸ್; ಇಂದು ಮಸೂದೆ ಮಂಡನೆ

Update: 2025-12-01 08:46 IST

ಸಾಂದರ್ಭಿಕ ಚಿತ್ರ PC: istockphoto

ಹೊಸದಿಲ್ಲಿ: ತಂಬಾಕು, ತಂಬಾಕು ಉತ್ಪನ್ನಗಳು ಮತ್ತ ಪಾನ್‌ಮಸಾಲಾ ಮೇಲೆ ಹೊಸ ಸೆಸ್ ವಿಧಿಸುವ ಸಂಬಂಧದ ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದ್ದಾರೆ.

ಜಿಎಸ್‌ಟಿ ದರ ಕಡಿತದ ಬಳಿಕವೂ ಈ ಉತ್ಪನ್ನಗಳ ಬೆಲೆ ಇಳಿಯಬಾರದು ಎಂಬ ಉದ್ದೇಶದಿಂದ ಈ ಉತ್ಪನ್ನಗಳ ಮೇಲೆ ಹೊಸದಾಗಿ ಸೆಸ್ ವಿಧಿಸಲು ಸರ್ಕಾರ ನಿರ್ಧರಿಸಿದೆ. ಜಿಎಸ್‌ಟಿ ಪರಿಷ್ಕರಣೆ ಸಂದರ್ಭದಲ್ಲೇ ಸರ್ಕಾರ ಈ ಉತ್ಪನ್ನಗಳ ಮೇಲೆ ಪರಿಹಾರಾತ್ಮಕ ಸೆಸ್ ವಿಧಿಸುವುದಾಗಿ ಪ್ರಕಟಿಸಿತ್ತು. ಸದ್ಯಕ್ಕೆ 2026ರ ಮಾರ್ಚ್‌ ವರೆಗೆ ಪರಿಹಾರಾತ್ಮಕ ಸೆಸ್ ವಿಧಿಸಲಾಗುತ್ತಿದ್ದು, ಆರೋಗ್ಯ ಮತ್ತು ಭದ್ರತಾ ಸೆಸ್ ರೂಪದಲ್ಲಿ ಈ ಉತ್ಪನ್ನಗಳ ಮೇಲೆ ಇನ್ನು ಮುಂದೆ ಸುಂಕ ವಿಧಿಸಲಾಗುತ್ತಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸರ್ಕಾರ ಮಾಡುವ ವೆಚ್ಚವನ್ನು ಭರಿಸುವ ಸಲುವಾಗಿ ನಿರ್ದಿಷ್ಟ ಉತ್ಪನ್ನಗಳ ಮೇಲೆ ಈ ಸುಂಕ ವಿಧಿಸಲಾಗುತ್ತಿದೆ ಎಂದು ಲೋಕಸಭೆಗೆ ಸಿದ್ಧಪಡಿಸಿರುವ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಇದರಿಂದ ಕ್ರೋಢೀಕರಿಸಿದ ಸಂಪನ್ಮೂಲದ ನೆರವಿನಿಂದ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಲಿದೆ. ಸರ್ಕಾರ ಚಳಿಗಾಲದ ಅಧಿವೇಶನದಲ್ಲೇ ಇದಕ್ಕೆ ಅನುಮೋದನೆ ಪಡೆದು, ಅಗತ್ಯ ಬಿದ್ದಾಗ ಹೊಸ ದಿನಾಂಕವನ್ನು ಗುರುತಿಸಲು ಸಾಧ್ಯವಾಗಲಿದೆ ಎಂಬ ವಿಶ್ವಾಸದಲ್ಲಿದೆ.

ಈ ಎರಡು ಉತ್ಪನ್ನಗಳ ಮೇಲೆ ಹೊಸ ಸುಂಕ ವಿಧಿಸಲಾಗುತ್ತದೆ ಎನ್ನುವುದನ್ನು ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ವೇಳೆಯೇ ಸ್ಪಷ್ಟಪಡಿಸಿತ್ತು. ಇದರ ಹಿಂದಿನ ಉದ್ದೇಶವೆಂದರೆ ಈ ಉತ್ಪನ್ನಗಳ ಬೆಲೆ ಇದೇ ಮಟ್ಟದಲ್ಲಿ ಉಳಿಯುವಂತೆ ಮಾಡುವುದು. ಇದು ಸರ್ಕಾರಕ್ಕೆ ಆದಾಯ ಹೆಚ್ಚಿಸುವ ಕ್ರಮ ಅಲ್ಲ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News