ಈಡಿ ಪ್ರಕರಣದ ಬಗ್ಗೆ ಸುದ್ದಿ ಲೇಖನ ಬರೆದಿದ್ದಕ್ಕೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದೆ: ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪ
PC : @SaketGokhale
ಹೊಸದಿಲ್ಲಿ : ಎರಡು ವರ್ಷಗಳ ಹಿಂದೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಈಡಿ) ಪ್ರಕರಣ ದಾಖಲಿಸಿದ ಕುರಿತು ಸುದ್ದಿ ಲೇಖನ ಬರೆದಿದ್ದಕ್ಕಾಗಿ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.
ಲೇಖನ ಬರೆದಿದ್ದಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿನ ತಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ಬುಧವಾರ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಸಾಕೇತ್ ಗೋಖಲೆ ಅವರು, ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿನಿಧಿಯಿಂದ ಈ ಬಗ್ಗೆ ಸ್ವೀಕರಿಸಲಾಗಿದ್ದು, ತಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.
“ಕಾರಣ ಕೇಳಿದರೆ ನಿಮ್ಮ ವಿರುದ್ಧ ಈಡಿ (ಜಾರಿ ನಿರ್ದೇಶನಾಲಯ) ಪ್ರಕರಣದ ಕುರಿತು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ ಎಂದು ಎಚ್‌ಡಿಎಫ್‌ಸಿ ಹೇಳಿತು. ಪ್ರಕರಣವು 2 ವರ್ಷ ಹಳೆಯದು ಎಂದು ನಾನು ಹೇಳಿದೆ," ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.
ಕ್ರೌಡ್‌ಫಂಡಿಂಗ್ ವೇದಿಕೆಯ ಮೂಲಕ ಗೋಖಲೆಯವರು 1,700 ಕ್ಕೂ ಹೆಚ್ಚು ವ್ಯಕ್ತಿಗಳಿಂದ 72 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಮತ್ತು ಹಣವನ್ನು ವೈಯಕ್ತಿಕ ಖರ್ಚಿಗೆ ಬಳಸಿದ್ದಾರೆ ಎಂಬ ಆರೋಪದಲ್ಲಿ ಗುಜರಾತ್ ಪೊಲೀಸರು ಡಿಸೆಂಬರ್ 2022 ರಲ್ಲಿ ಅವರ ವಿರುದ್ಧ FIR ಮಾಡಿದ್ದರು. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು.
ಆಗಸ್ಟ್ 13 ರಂದು, ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ಸಾಕೇತ್ ಗೋಖಲೆ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ ಎಂದು ಜಾರಿ ನಿರ್ದೇಶನಾಲಯ(ಈಡಿ) ತಿಳಿಸಿದೆ.
ಈ ಬೆಳವಣಿಗೆಯು ಮಾಧ್ಯಮಗಳಲ್ಲಿ ವರದಿಯಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿನಿಧಿಗೆ ಸಾಕೇತ್ ಗೋಖಲೆ, ತಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲು ಆದೇಶಗಳು ಬಂದಿವೆಯೇ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿನಿಧಿಯು, ಯಾವುದೇ ಆದೇಶಗಳಿಲ್ಲ. ಆದರೆ ನಾವು ಸುದ್ದಿಯನ್ನು ನೋಡಿ ನಿಮ್ಮ ಖಾತೆಯನ್ನು ನಿರ್ಬಂಧಿಸಿದ್ದೇವೆ ಎಂದು
ಎಚ್‌ಡಿಎಫ್‌ಸಿ ಪ್ರತಿನಿಧಿ ಹೇಳಿದರು ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.