ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳಲ್ಲಿ ಹೆಚ್ಚಳ; ಕೋಝಿಕ್ಕೋಡ್ ನಲ್ಲಿ ಶುಕ್ರವಾರದ ಪ್ರಾರ್ಥನೆ ರದ್ದು
Photo: PTI
ತಿರುವನಂತಪುರ: ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶುಕ್ರವಾರ ನಿಫಾ ವೈರಸ್ ಸೋಂಕಿನ ಮತ್ತೊಂದು ಪ್ರಕರಣ ದೃಢಪಟ್ಟಿದ್ದು, 39 ವರ್ಷದ ವ್ಯಕ್ತಿಯ ಮಾದರಿಯು ಪಾಸಿಟಿವ್ ಆಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ ಆರಕ್ಕೆ ಏರಿದೆ.
ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಕಚೇರಿಯ ಹೇಳಿಕೆಯ ಮೂಲಕ ಈ ವಿಷಯ ತಿಳಿಸಿದೆ.
ವ್ಯಕ್ತಿ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ನಿಪಾ-ಪಾಸಿಟಿವ್ ಪೀಡಿತ ಜನರು ಈ ಹಿಂದೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರಾಜ್ಯ ಆರೋಗ್ಯ ಸಚಿವರ ಹೇಳಿಕೆ ತಿಳಿಸಿದೆ.
ನಿಫಾ ವೈರಸ್ ನ ಒಟ್ಟು ಪ್ರಕರಣಗಳು ಆರು ಆಗಿದ್ದರೆ, ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ ನಂತರ ಸಕ್ರಿಯ ಪ್ರಕರಣಗಳು ನಾಲ್ಕಕ್ಕೆ ನಿಂತಿವೆ.
ಕೇರಳದ ಕೋಝಿಕ್ಕೋಡ್ ನಲ್ಲಿ ನಿಫಾ ಕಂಟೈನ್ ಮೆಂಟ್ ವಲಯಗಳಲ್ಲಿ ನಿರ್ಬಂಧಗಳನ್ನು ಮುಂದುವರೆಸಲಾಗಿದೆ ಹಾಗೂ "ಈ ರೋಗವನ್ನು ನಿಯಂತ್ರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಸಹಕರಿಸಲು ಶುಕ್ರವಾರದ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿದೆ.
ಕೇರಳದಲ್ಲಿ ನಿಫಾ ಹಾವಳಿ ಹಿನ್ನೆಲೆಯಲ್ಲಿ ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ. ಗೀತಾ ಗುರುವಾರ ಮತ್ತು ಶುಕ್ರವಾರ ಕೋಝಿಕ್ಕೋಡ್ನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರು.
‘ನಮ್ಮ ಭಾಗದಲ್ಲಿ ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಜನರನ್ನು ಸೇರಿಸದಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದು, ಆದೇಶ ಪಾಲಿಸಲು ನಿರ್ಧರಿಸಿದ್ದೇವೆ. ಮುಂದಿನ ಆದೇಶದವರೆಗೆ ಮಸೀದಿಯನ್ನು ಮುಚ್ಚುತ್ತೇವೆ. ಶುಕ್ರವಾರದ ಪ್ರಾರ್ಥನೆಯನ್ನು ಇಂದು ನಡೆಸಲಾಗುವುದಿಲ್ಲ. ಈ ರೋಗವನ್ನು ನಿಯಂತ್ರಿಸಲು ನಾವು ಸರಕಾರಿ ಅಧಿಕಾರಿಗಳೊಂದಿಗೆ ಸಹಕರಿಸುತ್ತೇವೆ ಎಂದು ಕುಟ್ಟಿಯಾಡಿ ಜುಮಾ ಮಸೀದಿ ಮಹಲ್ಲು ಸಮಿತಿ ಕಾರ್ಯದರ್ಶಿ ಝುಬೇರ್ ಪಿ. ಹೇಳಿದ್ದಾರೆ.