ಒಬ್ಬ ಸಹೋದರ ವಿರೋಧಿಸಿದರೆ ಅದು ಇಡೀ ಕುಟುಂಬದ ನಿಲುವೆಂದರ್ಥವಲ್ಲ: ʼನಿಮಿಷಾʼ ಪರ ವಕೀಲರ ಹೇಳಿಕೆ
PC : newindianexpress.com
ಸನಾ(ಯೆಮೆನ್): “ಒಬ್ಬ ಸಹೋದರ ವಿರೋಧ ವ್ಯಕ್ತಪಡಿಸಿದರೆ, ಅದು ಇಡೀ ಕುಟುಂಬದ ನಿಲುವಾಗಲಿದೆ ಎಂಬುದನ್ನು ಸೂಚಿಸುವುದಿಲ್ಲ. ನಾವು ಈ ನಿರಾಕರಣೆಯನ್ನು ಪ್ರಕ್ರಿಯೆಯ ಭಾಗವಾಗಿ ನೋಡುತ್ತೇವೆಯೆ ಹೊರತು, ಇದು ಪ್ರಕರಣಕ್ಕೆ ಹಿನ್ನಡೆಯಾಗಿ ಅಲ್ಲ”, ಎಂದು ಯೆಮನ್ ನ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪರವಾಗಿ ವಕಾಲತ್ತು ನಡೆಸುತ್ತಿರುವ ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೆಮನ್ ನಲ್ಲಿ ಮರಣದಂಡನೆಗೆ ಶಿಕ್ಷೆಗೊಳಗಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ಜುಲೈ 16 ರಂದು ಜಾರಿಗೊಳಿಸಲಾಗಬೇಕಿತ್ತು. ಆದರೆ, ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಹಸ್ತಕ್ಷೇಪದ ನಂತರ, ಯೆಮನ್ ಸರ್ಕಾರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿದೆ. ಈಗ ಪ್ರಕರಣವು ಮತ್ತೊಂದು ತೀವ್ರ ತಿರುವು ಪಡೆದುಕೊಂಡಿದ್ದು, ಕೊಲೆಯಾದ ತಲಾಲ್ ಅಬ್ದೋ ಮಹ್ದಿ ಅವರ ಕುಟುಂಬದ ಸದಸ್ಯರ ಪೈಕಿ ಕೆಲವರು ಈ ರಾಜಿ ಪ್ರಕ್ರಿಯೆಗೆ ಒಪ್ಪುತ್ತಿಲ್ಲ ಎಂದು ತಿಳಿದು ಬಂದಿದೆ. ತಲಾಲ್ ಅವರ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ, ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ “ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ, ಪರಿಹಾರದ ಹಣ ಬೇಡ, ಮರಣದಂಡನೆಯೇ ನ್ಯಾಯ,” ಎಂದು ಘೋಷಿಸಿದ್ದಾರೆ.
ಈ ಕುರಿತು ನಿಮಿಷಾ ಪ್ರಿಯಾ ಅವರ ಪರವಾಗಿ ವಕಾಲತ್ತು ನಡೆಸುತ್ತಿರುವ ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಹೇಳಿಕೆ ಮಧ್ಯಸ್ಥಿಕೆ ಪ್ರಕ್ರಿಯೆಗೆ ಹೊಸ ಆಯಾಮ ನೀಡಿದೆ. ಸುಭಾಸ್ ಚಂದ್ರನ್ ‘ಸೇವ್ ನಿಮಿಷಾ ಪ್ರಿಯಾ ಅಂತರರಾಷ್ಟ್ರೀಯ ಕ್ರಿಯಾ ಮಂಡಳಿ’ಯ ಸದಸ್ಯರಾಗಿದ್ದಾರೆ. ಈ ಕ್ರಿಯಾ ಮಂಡಳಿಯು 19 ಸದಸ್ಯರ ಕೋರ್ ಸಮಿತಿ ಹಾಗೂ 300 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಮಂಡಳಿಯು ಈಗಾಗಲೇ ತಲಾಲ್ ಮಹ್ದಿ ಅವರ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಿದೆ.
ಮಧ್ಯಸ್ಥಿಕೆಗಾಗಿ ಕಾಂತಪುರಂ ಮುಸ್ಲಿಯಾರ್ ಅವರು ನೇರವಾಗಿ ಮಾತನಾಡಿದ್ದು, ಅದರಿಂದಾಗಿ ಪ್ರಮುಖ ಉದ್ಯಮಿಗಳು ಎಂ ಎ ಯೂಸುಫ್ ಅಲಿ (ಲುಲು ಗ್ರೂಪ್) ಮತ್ತು ಬಾಬಿ ಚೆಮ್ಮನೂರ್ ಮುಂತಾದವರು ದಿಯತ್ ಹಣ ಒದಗಿಸಲು ಮುಂದೆ ಬಂದಿರುವುದನ್ನು ವಕೀಲರು ದೃಢಪಡಿಸಿದ್ದಾರೆ.
ನಿಮಿಷಾ ಪ್ರಿಯಾ ಅವರ ಶಿಕ್ಷೆಯನ್ನು ಮುಂದೂಡಿರುವ ನಿರ್ಧಾರವು ಕೇರಳದ ಪಾಲಕ್ಕಾಡ್‌ನಲ್ಲಿ ನೆಲೆಸಿರುವ ಅವರ ಕುಟುಂಬಕ್ಕೆ ತಾತ್ಕಾಲಿಕ ನೆಮ್ಮದಿ ಒದಗಿಸಿದೆ. ಯೆಮನ್‌ನಲ್ಲಿ ಶರಿಯಾ ಆಧಾರಿತ ಕ್ರಿಮಿನಲ್ ನ್ಯಾಯವ್ಯವಸ್ಥೆಯ ಅಡಿಯಲ್ಲಿ, ಕೊಲೆ ಪ್ರಕರಣಗಳಲ್ಲಿ ದಿಯತ್ ಅಥವಾ ಪರಿಹಾರದ ಹಣವನ್ನು ಕೊಲೆಗೆ ಪರಿಹಾರವಾಗಿ ರೂಪವಾಗಿ ಒದಗಿಸುವ ಮೂಲಕ ಮರಣದಂಡನೆ ತಪ್ಪಿಸಿಕೊಳ್ಳಬಹುದಾಗಿದೆ. ಆದರೆ, ಈ ವ್ಯವಸ್ಥೆಗೆ ಸಂತ್ರಸ್ತರ ಕುಟುಂಬದ ಒಪ್ಪಿಗೆ ಬೇಕಾಗುತ್ತದೆ. ಮಹ್ದಿ ಕುಟುಂಬ ಈ ಪರಿಹಾರದ ಹಣವನ್ನು ನಿರಾಕರಿಸಿರುವುದರಿಂದ, ನಿಮಿಷಾ ಪ್ರಿಯಾ ಅವರು ಗಲ್ಲಿನ ಕುಣಿಕೆಯಿಂದ ಪಾರಾಗಲು ಇನ್ನೂ ಹೆಚ್ಚಿನ ಸವಾಲುಗಳಿದೆ ಎನ್ನಲಾಗಿದೆ.
“ಶಿಕ್ಷೆಯ ವಿಳಂಬವು ಮರಣದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಜೀವ ಖರೀದಿಸಲು ಸಾಧ್ಯವಿಲ್ಲ. ನಾವು ದೇವರ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಎಷ್ಟು ಸಮಯ ಬೇಕಾದರೂ ಸರಿ, ಪ್ರತೀಕಾರವನ್ನು ತೀರಿಸಿಕೊಳ್ಳಲು ನಾವು ಕಾಯುತ್ತೇವೆ,” ಎಂದು ತಲಾಲ್ ಅವರ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್ ಮೂಲದ ನಿಮಿಷಾ ಪ್ರಿಯಾ, ತಮ್ಮ ಪತಿ ಮತ್ತು ಮಗನೊಂದಿಗೆ 2012ರಲ್ಲಿ ಯೆಮೆನ್‌ಗೆ ತೆರಳಿದ್ದರು. ನರ್ಸ್ ಆಗಿದ್ದ ನಿಮಿಷ ಪ್ರಿಯಾ ಯೆಮನ್ ನಲ್ಲಿಯೇ ಕೆಲಸ ಮುಂದುವರೆಸಿದರು. ಅವರು ಯೆಮೆನ್ ಪ್ರಜೆ ತಲಾಲ್ ಅಬ್ದುಲ್ ಮಹ್ದಿ ಅವರ ಸಹಾಯವನ್ನು ಪಡೆದು ವ್ಯಾಪಾರ ಪಾಲುದಾರಿಕೆಯಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು. ಆ ಬಳಿಕ ತಲಾಲ್ ಅವರು ಕಿರುಕುಳ ಹೆಚ್ಚಾಯಿತು. ನಿಮಿಷಾರ ಪಾಸ್‌ಪೋರ್ಟ್ ತನ್ನ ವಶಕ್ಕೆ ತೆಗೆದುಕೊಂಡು ಕಿರುಕುಳ ನೀಡಿದರು ಎಂದು ಆರೋಪಿಸಲಾಗಿದೆ.
ಒಂದು ಹಂತದವರೆಗೆ ಎಲ್ಲವನ್ನೂ ಸಹಿಸಿದ ನಿಮಿಷಾ, ಮುಂದೆ ಸಹಿಸಲಾಗದಿದ್ದಾಗ, ಅಲ್ಲಿನ ಅಧಿಕಾರಿಗಳಿಗೆ ದೂರು ನೀಡಿದರು. ತನ್ನ ಪಾಸ್ ಪೋರ್ಟ್ ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ, ತಲಾಲ್ ಗೆ ನೀಡಿದ ಅರವಳಿಕೆಯ ಪ್ರಮಾಣ ಹೆಚ್ಚಾದ್ದರಿಂದ ತಲಾಲ್ ಮೃತಪಟ್ಟಿದ್ದರು. ಆ ಬಳಿಕ ನಿಮಿಷಾ ಅವರ ಮೇಲೆ ಕೊಲೆ ಆರೋಪ ಹೊರಿಸಲಾಯಿತು. ಅಂತಿಮವಾಗಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ನಿಮಿಷಾ ಅವರ ಮೇಲ್ಮನವಿಗಳನ್ನು ಅಲ್ಲಿನ ಸರಕಾರವು ತಳ್ಳಿಹಾಕಿದೆ. ನಿಮಿಷಾರನ್ನು ಮರಣದಂಡನೆಯಿಂದ ಉಳಿಸಿಕೊಳ್ಳಲು ಈಗ ಮಾನವೀಯತೆಯ ಮಾರ್ಗವೊಂದೇ ಉಳಿದಿದೆ.