×
Ad

ನಿಮಿಷಾ ಪ್ರಿಯಾ ಪ್ರಕರಣ | ಮಾಧ್ಯಮಗಳಿಂದ ವರದಿ ನಿರ್ಬಂಧ ಕೋರಿದ್ದ ಮಿಶನರಿ ಪೌಲ್ ಅರ್ಜಿಗೆ ಸುಪ್ರೀಂ ತಿರಸ್ಕಾರ

Update: 2025-08-25 20:12 IST

ನಿಮಿಷಾ ಪ್ರಿಯ

ಹೊಸದಿಲ್ಲಿ,ಆ.25: ಕೊಲೆ ಆರೋಪದಲ್ಲಿ ಯಮನ್‌ ನಲ್ಲಿ ಮರಣದಂಡನೆಯನ್ನು ಎದುರಿಸುತ್ತಿರುವ ಕೇರಳ ಮೂಲದ ನರ್ಸ ನಿಮಿಷಾ ಪ್ರಿಯಾರ ಕುರಿತು ಮಾಧ್ಯಮ ವರದಿಗಳನ್ನು ನಿರ್ಬಂಧಿಸುವಂತೆ ಕೋರಿ ಕ್ರೈಸ್ತ ಧರ್ಮಪ್ರಚಾರಕ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿತು.

‘ನಿಮಿಷಾಗೆ ಏನಾದರೂ ಸಂಭವಿಸಿದರೆ ನಾನು ಹೊಣೆಯಲ್ಲ’ ಎಂದು ಪೌಲ್ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪರಿಶೀಲಿಸಲ್ಪಡದ ಸಾರ್ವಜನಿಕ ಹೇಳಿಕೆಗಳನ್ನು ಪ್ರಕಟಿಸುತ್ತಿವೆ ಎಂದು ಅರ್ಜಿಯಲ್ಲಿ ದೂರಿದ್ದ ಪೌಲ್, ತಾನು ನಿಮಿಷಾ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು,ಮಾಧ್ಯಮ ವರದಿಗಳನ್ನು ನಿರ್ಬಂಧಿಸುವಂತೆ ಕೋರಿದ್ದರು.

ಮಾಧ್ಯಮ ವರದಿಗಳ ಸಮಸ್ಯೆಯನ್ನು ತಾನು ಬಗೆಹರಿಸುವುದಾಗಿ ಕೇಂದ್ರ ಸರಕಾರದ ಹೇಳಿಕೆಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪೌಲ್ ಅರ್ಜಿಯನ್ನು ಅಂಗೀಕರಿಸಲು ನಿರಾಕರಿಸಿತು.

‘ನೀವು ಏನು ಬಯಸುತ್ತಿದ್ದೀರಿ? ಯಾರೂ ಮುಂದೆ ಬಂದು ಮಾಧ್ಯಮಗಳಿಗೆ ಏನನ್ನೂ ಹೇಳಬಾರದು ಎಂದು ನೀವು ಬಯಸಿದ್ದೀರಾ? ಯಾರೂ ಮಾಧ್ಯಮಗಳಿಗೆ ಮಾಹಿತಿಗಳನ್ನು ನೀಡದಂತೆ ಸರಕಾರವು ನೋಡಿಕೊಳ್ಳುತ್ತದೆ ಎಂದು ಅಟಾರ್ನಿ ಜನರಲ್ ತಿಳಿಸಿದ್ದಾರೆ. ನಿಮಗೆ ಬೇರೇನು ಬೇಕು?’ ಎಂದು ಪೀಠವು ಪ್ರಶ್ನಿಸಿತು.

ಇದಕ್ಕೂ ಮುನ್ನ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ನಿಮಿಷಾ ಪ್ರಿಯಾ ಪ್ರಕರಣವು ಸೂಕ್ಷ್ಮ ವಿಷಯವಾಗಿದೆ ಮತ್ತು ಅದು ಇತ್ಯರ್ಥಗೊಳ್ಳುವವರೆಗೆ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆಯಾಗದಂತೆ ತಾನು ನೋಡಿಕೊಳ್ಳುವುದಾಗಿ ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News