ಸೇವಾ ವಲಯದಿಂದ ಕಳೆದ ಆರು ವರ್ಷಗಳಲ್ಲಿ ನಾಲ್ಕು ಕೋಟಿ ಉದ್ಯೋಗಗಳ ಸೇರ್ಪಡೆ: ನೀತಿ ಆಯೋಗ
Photo credit: PTI
ಹೊಸದಿಲ್ಲಿ,ಅ.28: ಭಾರತದ ಸೇವಾ ವಲಯವು ಉದ್ಯೋಗ ಸೃಷ್ಟಿಯ ಶಕ್ತಿಕೇಂದ್ರವಾಗಿ ವೇಗದಿಂದ ಹೊರಹೊಮ್ಮುತ್ತಿದ್ದು, ನೀತಿ ಆಯೋಗದ ಎರಡು ನೂತನ ವರದಿಗಳ ಪ್ರಕಾರ ಒಟ್ಟು ಉದ್ಯೋಗಗಳಲ್ಲಿ ಅದರ ಪಾಲು 2011-12ರಲ್ಲಿದ್ದ ಶೇ.26.9ರಿಂದ 2023-24ರಲ್ಲಿ ಶೇ.29.7ಕ್ಕೇರಿದೆ.
ಸೇವಾ ವಲಯವು ಕಳೆದ ಆರು ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಉದ್ಯಮದಲ್ಲಿ ಸಾಟಿಯಿಲ್ಲದ ವೇಗದಲ್ಲಿ ಕಾರ್ಮಿಕರನ್ನು ಸೇರಿಸಿಕೊಂಡಿದೆ. ತನ್ಮೂಲಕ ದೇಶದಲ್ಲಿ ಉದ್ಯೋಗ ಬೆಳವಣಿಗೆಯಲ್ಲಿ ತನ್ನ ಪ್ರಮುಖ ಪಾತ್ರವನ್ನು ಸಾಬೀತುಗೊಳಿಸಿದೆ ಎಂದು ನೀತಿ ಆಯೋಗವು ಹೇಳಿದೆ.
ನೀತಿ ಆಯೋಗವು ಮಂಗಳವಾರ ಬಿಡುಗಡೆಗೊಳಿಸಿದ ‘ಭಾರತದ ಸೇವಾ ವಲಯದಲ್ಲಿ ಉದ್ಯೋಗದ ಬೆಳವಣಿಗೆ ಮತ್ತು ರಾಜ್ಯಮಟ್ಟದ ಬದಲಾವಣೆಗಳ ವಿಶ್ಲೇಷಣೆ’ ಮತ್ತು ಭಾರತದ ಸೇವಾ ವಲಯ:ಒಟ್ಟು ಮೌಲ್ಯ ವರ್ಧನೆ ಪ್ರವೃತ್ತಿಗಳು ಮತ್ತು ರಾಜ್ಯಮಟ್ಟದ ಚಲನಶೀಲತೆಗಳಿಂದ ಪಡೆದ ಒಳನೋಟಗಳು’ವರದಿಗಳ ಪ್ರಕಾರ,ಈ ವಲಯವು ಕಳೆದ ಆರು ವರ್ಷಗಳಲ್ಲಿ ಸುಮಾರು ನಾಲ್ಕು ಕೋಟಿ ಉದ್ಯೋಗಗಳನ್ನು ಸೇರಿಸುವುದರೊಂದಿಗೆ ಈ ಕ್ಷೇತ್ರದಲ್ಲಿ ಒಟ್ಟು ಉದ್ಯೋಗಗಳನ್ನು 18.8 ಕೋಟಿಗೆ ಏರಿಸಿದೆ. ತನ್ಮೂಲಕ ಕೃಷಿಯ ಬಳಿಕ ಎರಡನೇ ಅತಿ ದೊಡ್ಡ ಉದ್ಯೋಗದಾತ ಎಂಬ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ನೀತಿ ಆಯೋಗದ ಪ್ರಕಾರ ವ್ಯಾಪಾರ,ದುರಸ್ತಿ ಮತ್ತು ಸಾರಿಗೆಯತಹ ಕ್ಷೇತ್ರಗಳು ಈಗಲೂ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೂ ಹಣಕಾಸು,ಮಾಹಿತಿ ತಂತ್ರಜ್ಞಾನ ಮತ್ತು ವೃತ್ತಿಪರ ಸೇವೆಗಳಂತಹ ಹೊಸ ಕ್ಷೇತ್ರಗಳು ತ್ವರಿತವಾಗಿ ಮುಂದಿನ ದೊಡ್ಡ ಉದ್ಯೋಗ ಸೃಷ್ಟಿಕರ್ತರಾಗುತ್ತಿವೆ. ಈ ಆಧುನಿಕ ಸೇವೆಗಳು ಉತ್ತಮ ವೇತನ ಮತ್ತು ಬೆಳೆಯುತ್ತಿರುವ ಜಾಗತಿಕ ಸಂಪರ್ಕಗಳೊಂದಿಗೆ ಅವಕಾಶಗಳನ್ನು ಹೆಚ್ಚಿಸುತ್ತಿವೆ.