ಬಿಹಾರ| ಇಂದು ನಿತೀಶ್ ಕುಮಾರ್ ರಾಜೀನಾಮೆ; 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜು
ನಿತೀಶ್ ಕುಮಾರ್ (Photo credit: PTI)
ಪಾಟ್ನಾ: ಬುಧವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿದ್ದು, 10ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಅಧಿಕೃತ ವೇದಿಕೆ ಸಜ್ಜಾಗಿದೆ. ಇದಕ್ಕೂ ಮುನ್ನ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಪ್ರಚಂಡ ಜಯಭೇರಿ ಬಾರಿಸಿತ್ತು.
ಜೆಡಿಯು ರಾಜ್ಯ ಕಚೇರಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಆಯೋಜನೆಗೊಂಡಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಜೆಡಿಯು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಾದ ಬಳಿಕ, ಮಧ್ಯಾಹ್ನ 3.30 ಗಂಟೆಗೆ ಎನ್ಡಿಎ ಮೈತ್ರಿಕೂಟದ ಎಲ್ಲ ಮಿತ್ರಪಕ್ಷಗಳೂ ನಿತೀಶ್ ಕುಮಾರ್ ಅವರನ್ನು ಮೈತ್ರಿಕೂಟದ ನಾಯಕನನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲು ಬಿಹಾರ ವಿಧಾನ ಸಭೆಯ ಸೆಂಟ್ರಲ್ ಹಾಲ್ ನಲ್ಲಿ ಸೇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ, ಮುಖ್ಯಮಂತ್ರಿ ಹುದ್ದೆಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲು ರಾಜಭವನಕ್ಕೆ ತೆರಳಲಿರುವ ನಿತೀಶ್ ಕುಮಾರ್, ಇದೇ ವೇಳೆ ತಮ್ಮ ಬೆಂಬಲದ ಪತ್ರವನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಸಲ್ಲಿಸಿ, ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದಾದ ಬಳಿಕ ಅವಧಿ ಮುಗಿದಿರುವ ವಿಧಾನಸಭೆ ವಿಸರ್ಜನೆಗೊಳ್ಳಲಿದೆ.