×
Ad

ದೇವಾಲಯಗಳಲ್ಲಿ ಇತರೆ ಧರ್ಮದವರಿಗೆ ಉದ್ಯೋಗಾವಕಾಶವಿಲ್ಲ: ಆಂಧ‍್ರ ಹೈಕೋರ್ಟ್

Update: 2023-11-21 19:08 IST

ಆಂಧ‍್ರಪ್ರದೇಶ ಹೈಕೋರ್ಟ್ | Photo: X

ವಿಜಯವಾಡ: ದೇವಾಲಯಗಳಲ್ಲಿ ಇತರೆ ಧರ್ಮದ ಜನರಿಗೆ ಉದ್ಯೋಗಕಾಶವಿಲ್ಲ. ಹಿಂದೂ ಧರ್ಮವನ್ನು ಪಾಲಿಸುವವರು ಮಾತ್ರ ದೇವಾಲಯಗಳಲ್ಲಿ ಉದ್ಯೋಗ ನಿರ್ವಹಿಸಲು ಅರ್ಹರಾಗಿದ್ದಾರೆ ಎಂದು ಆಂಧ‍್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ ಎಂದು newindianexpress.com ವರದಿ ಮಾಡಿದೆ.

ಇತ್ತೀಚೆಗೆ ಪಿ.ಸುದರ್ಶನ್ ಬಾಬು ಎಂಬವರು ತಮ್ಮನ್ನು ಶ್ರೀಶೈಲಂ ದೇವಸ್ಥಾನಂನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಹರಿನಾಥ್ ನುನೆಪಲ್ಲಿ, ಅರ್ಜಿದಾರರು ತಾವು ಕ್ರಿಶ್ಚಿಯನ್ ಧರ್ಮದವರು ಎಂಬ ಸಂಗತಿಯನ್ನು ಬಚ್ಚಿಟ್ಟು, ಅನುಕಂಪಾಧಾರಿತವಾಗಿ ಸಹಾಯಕ ದಾಖಲೆ ಸಂಗ್ರಹಕಾರ ಹುದ್ದೆ ಗಿಟ್ಟಿಸಿಕೊಂಡಿರುವುದನ್ನು ಪತ್ತೆ ಹಚ್ಚಿ, ಇತ್ತೀಚೆಗೆ ಮೇಲಿನಂತೆ ತೀರ್ಪು ನೀಡಿದ್ದಾರೆ.

ಇದಕ್ಕೂ ಮುನ್ನ, 2002ರಲ್ಲಿ ತಾವು ಪರಿಶಿಷ್ಟ ಜಾತಿ (ಮಾಲ) ಜಾತಿಗೆ ಸೇರಿದವರಾಗಿದ್ದು, ಅನುಕಂಪಾಧಾರಿತ ಹುದ್ದೆಯನ್ನು ಪಡೆದಿದ್ದೇನೆ ಎಂದು ಅರ್ಜಿದಾರ ಸುದರ್ಶನ್ ಬಾಬು ವಾದಿಸಿದ್ದರು.

ನಂತರ, 2010ರಲ್ಲಿ ಹೋಲಿ ಕ್ರಾಸ್ ಚರ್ಚ್ ನಲ್ಲಿ ಕ್ರಿಶ‍್ಚಿಯನ್ ಸಮುದಾಯದ ಮಹಿಳೆಯೊಬ್ಬರನ್ನು ಅವರು ವಿವಾಹವಾಗಿದ್ದರು. ಇದಾದ ನಂತರ, ತಾನು ಹಿಂದೂ ಧರ್ಮಕ್ಕೆ ಸೇರಿದ್ದೇನೆ ಎಂದು ಸುಳ್ಳು ಹೇಳಿ, ಅರ್ಜಿದಾರ ಸುದರ್ಶನ್ ದೇವಾಲಯದಲ್ಲಿ ಹುದ್ದೆ ಪಡೆದಿದ್ದಾರೆ ಎಂದು ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.

ಲೋಕಾಯುಕ್ತ ನೋಟಿಸ್ ಗೆ ಪ್ರತಿಯಾಗಿ, ನಾನು ನನ್ನ ನಂಬಿಕೆಯನ್ನು ಮುಚ್ಚಿಟ್ಟಿಲ್ಲ ಎಂದು ಪ್ರತಿಪಾದಿಸಿದ್ದ ಸುದರ್ಶನ್, ತಮ್ಮ ಜಾತಿ ಪ್ರಮಾಣ ಪತ್ರ ಹಾಗೂ ಶಾಲಾ ದಾಖಲಾತಿಗಳನ್ನು ಲೋಕಾಯುಕ್ತಕ್ಕೆ ಒದಗಿಸಿದ್ದರು.

ಸುದರ್ಶನ್ ಬಾಬು ಒದಗಿಸಿದ ಹಲವಾರು ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತವು, ಅವರು ತಮ್ಮ ಧರ್ಮವನ್ನು ಮುಚ್ಚಿಟ್ಟಿದ್ದಾರೆ ಎಂಬ ಸಂಗತಿಯನ್ನು ಪತ್ತೆ ಹಚ್ಚಿತ್ತು. ಇದರ ಬೆನ್ನಿಗೇ ಶ್ರೀಶೈಲಂ ದೇವಾಲಯವು ಅವರನ್ನು ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ತೆಗೆದು ಹಾಕಿತ್ತು.

ಇದಾದ ನಂತರ, 2012ರಲ್ಲಿ ತಮ್ಮನ್ನು ಹುದ್ದೆಯಿಂದ ವಜಾಗೊಳಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಸುದರ್ಶನ್ ಬಾಬು ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಹಲವಾರು ದಾಖಲೆಗಳನ್ನು ಪರಿಶೀಲಿಸಿದ ನ್ಯಾ. ಹರಿನಾಥ್, ಹೋಲಿ ಕ್ರಾಸ್ ಚರ್ಚ್ ದಾಖಲಾತಿ ಪುಸ್ತಕದಲ್ಲಿ ಅರ್ಜಿದಾರರ ಧರ್ಮವನ್ನು ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ ಹಾಗೂ ಆ ಪುಸ್ತಕಕ್ಕೆ ಅರ್ಜಿದಾರರು ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ಸುದರ್ಶನ್ ಬಾಬು ಅವರು ಕ್ರಿಶ‍್ಚಿಯನ್ ಧರ್ಮಕ್ಕೆ ಮತಾಂತರವಾಗದೆ ವಿವಾಹವಾಗಿದ್ದಿದ್ದರೆ, ಅದನ್ನು ವಿಶೇಷ ವಿವಾಹಗಳ ಕಾಯ್ದೆ, 1954ರ ಅಡಿ ನೋಂದಾಯಿಸಬೇಕಿತ್ತು. ಆದರೆ, ಸುದರ್ಶನ್ ಬಾಬು ಪ್ರಕರಣದಲ್ಲಿ ಹಾಗೆ ನಡೆದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News