ಚುನಾವಣಾ ಆಯೋಗದ ಕ್ರಮಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ: ರಾಜ್ಯಸಭಾ ಉಪ ಸಭಾಪತಿ ಹರಿವಂಶ್
1988ರ ಬಲರಾಮ್ ಜಾಖಡ್ ಅವರ ತೀರ್ಪು ಉಲ್ಲೇಖಿಸಿ ಎಸ್ಐಆರ್ ಕುರಿತ ಚರ್ಚೆಗೆ ಅವಕಾಶ ನಿರಾಕರಣೆ
Credit: PTI File Photo
ಹೊಸದಿಲ್ಲಿ: ಸಂಸತ್ತಿನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಚರ್ಚೆಗೆ ಸರಕಾರ ಒಪ್ಪುವುದಿಲ್ಲ ಎಂಬ ಸ್ಪಷ್ಟ ಸೂಚನೆಗಳು ಸಂಸತ್ತಿನಲ್ಲಿ ಕಂಡು ಬಂದಿದೆ. ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳು ಅಥವಾ ನಿರ್ಧಾರಗಳ ಕುರಿತು ಚರ್ಚಿಸುವುದರ ವಿರುದ್ಧ 1988ರ ಬಲರಾಮ್ ಜಾಖಡ್ ಅವರ ತೀರ್ಪನ್ನು ರಾಜ್ಯಸಭಾ ಉಪಸಭಾಪತಿ ಹರಿವಂಶ್ ಉಲ್ಲೇಖಿಸಿದ್ದಾರೆ.
ಸಂಸತ್ತಿನ ನಿಗದಿತ ವ್ಯವಹಾರವನ್ನು ಸ್ಥಗಿತಗೊಳಿಸಿ ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಎಸ್ಐಆರ್ ಬಗ್ಗೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಸಲ್ಲಿಸಿದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿ ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಬಲರಾಮ್ ಜಾಖಡ್ ಅವರ ತೀರ್ಪನ್ನು ಉಲ್ಲೇಖಿಸಿದ್ದಾರೆ. 34 ವಿರೋಧ ಪಕ್ಷದ ಸಂಸದರು ನಿಲುವಳಿ ಸೂಚನೆಯನ್ನು ಸಲ್ಲಿಸಿದ್ದರು. ಅದರಲ್ಲಿ ಹೆಚ್ಚಿನವುಗಳು ಎಸ್ಐಆರ್ ಕುರಿತಾಗಿತ್ತು.
ರಾಜ್ಯಸಭೆ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮ 267ರ ಅಡಿಯಲ್ಲಿ 2000 ಮತ್ತು 2004ರ ನಡುವೆ ಒಂದೇ ಒಂದು ನಿಲುವಳಿ ಸೂಚನೆಯನ್ನು ಅಂಗೀಕರಿಸಲಾಗಿಲ್ಲ ಮತ್ತು 2004 ಮತ್ತು 2009ರ ನಡುವೆ ನಾಲ್ಕು ಸೂಚನೆಗಳನ್ನು ಅಂಗೀಕರಿಸಲಾಗಿದೆ. 2009ರಿಂದ 2014ರ ಅವಧಿಯಲ್ಲಿ 491 ನಿಲುವಳಿ ಸೂಚನೆಗಳಲ್ಲಿ ಒಂದನ್ನು ಮಾತ್ರ ಅಂಗೀಕರಿಸಲಾಗಿದೆ. 3,152 ನಿಲುವಳಿ ಸೂಚನೆಗಳಲ್ಲಿ ಆರು ನಿಲುವಳಿ ಸೂಚನೆಗಳನ್ನು 2014ರಿಂದ 2025ರ ಬಜೆಟ್ ಅಧಿವೇಶನದವರೆಗೆ ಅಂಗೀಕರಿಸಲಾಗಿದೆ ಎಂದು ಹೇಳಿದರು. ನಂತರ ಹರಿವಂಶ್ 1988ರ ಡಿಸೆಂಬರ್ 14ರಂದು ಬಲರಾಮ್ ಜಾಖಡ್ ನೀಡಿದ ತೀರ್ಪನ್ನು ಉಲ್ಲೇಖಿಸಿದರು. ಅದರಲ್ಲಿ ಅವರು ಚುನಾವಣಾ ಆಯೋಗದ ಕ್ರಮಗಳು ಮತ್ತು ನಿರ್ಧಾರಗಳ ಕುರಿತು ಯಾವುದೇ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದ್ದರು.
ಲೋಕಸಭೆಯ ಸ್ಫೀಕರ್ ಆಗಿದ್ದ ಬಲರಾಮ್ ಜಾಖಡ್ ಅವರು ನಾನು ಚುನಾವಣಾ ಆಯೋಗದ ಕ್ರಮಗಳು ಮತ್ತು ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಅದು ಸ್ವಾಯತ್ತ ಸಂಸ್ಥೆಯಾಗಿದೆ. ನಾನು ಇದನ್ನು ಹಿಂದೆಂದೂ ಮಾಡಿಲ್ಲ ಅಥವಾ ಈಗಲೂ ಮಾಡುವುದಿಲ್ಲ. ನೀವು ಸಂವಿಧಾನಕ್ಕೆ ತಿದ್ದುಪಡಿ ತಂದು ಚುನಾವಣಾ ಆಯೋಗವನ್ನು ನಿಮ್ಮ ವ್ಯಾಪ್ತಿಗೆ ತರುವವರೆಗೆ, ಚುನಾವಣಾ ಆಯೋಗದ ಕ್ರಮಗಳ ಬಗ್ಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಅದರ ನಿರ್ಧಾರವನ್ನು ಇಲ್ಲಿ ಚರ್ಚಿಸಲಾಗುವುದಿಲ್ಲ ಎಂದು ಹೇಳಿದ್ದರು.
ಈ ಹಿಂದೆ ಲೋಕಸಭೆಯ ಪಕ್ಷದ ನಾಯಕರೊಂದಿಗಿನ ಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಕೂಡ ಜಾಖಡ್ ಅವರ ತೀರ್ಪಿನ ಬಗ್ಗೆ ಉಲ್ಲೇಖಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಸದನದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ಸರಕಾರ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಎನ್ನುವುದನ್ನು ಸೂಚಿಸುತ್ತದೆ.