ಉತ್ತರ ಬಂಗಾಳ: ಪ್ರವಾಹದಿಂದ 28 ಮಂದಿ ಮೃತ್ಯು; ಜನಜೀವನ ಅಸ್ತವ್ಯಸ್ತ
PC: x.com/sarkar28922
ಕೊಲ್ಕತ್ತಾ: ಉತ್ತರ ಬಂಗಾಳ ಪ್ರದೇಶದಲ್ಲಿ ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ಬಿದ್ದ ವ್ಯಾಪಕ ಮಳೆಯಿಂದ ಹಲವೆಡೆ ಭೂಕುಸಿತಗಳು ಸಂಭವಿಸಿದ್ದು, ಡಾರ್ಜಲಿಂಗ್‌ನಿಂದ ಕೂಚ್ ಬೆಹಾರ್ ವರೆಗೆ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಕನಿಷ್ಠ 28 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇಡೀ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕಾರ್ಯಾಚರಣೆಗಾಗಿ ರಕ್ಷಣಾ ತಂಡಗಳು ಗಡ್ಡಗಾಡು ಪ್ರದೇಶಗಳನ್ನು ತಲುಪುವುದಕ್ಕೂ ಸಾಧ್ಯವಾಗುತ್ತಿಲ್ಲ.
ರಸ್ತೆ ಹಾಗೂ ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ರಾಜ್ಯದ ಇತರ ಭಾಗಗಳ ಜತೆ ಸಂಪರ್ಕ ಕಡಿದು ಹೋಗಿದೆ. ಶನಿವಾರ ಬೆಳಿಗ್ಗೆಯಿಂದ 24 ಗಂಟೆ ಅವಧಿಯಲ್ಲಿ ಡಾರ್ಜಲಿಂಗ್‌ನಲ್ಲಿ 261 ಮಿಲಿಮೀಟರ್ ಮಳೆ ಬಿದ್ದಿದೆ. ಕೂಚ್ ಬೆಹಾರ್ ನಲ್ಲಿ 192 ಮಿಲಿಮೀಟರ್ ಮಳೆ ಬಿದ್ದಿದೆ. ಜಲಪೈಗುರಿ (172 ಮಿಲಿಮೀಟರ್) ಗಜೋಲ್ದೋಬಾ (300 ಮಿಲಿಮೀಟರ್) ಭಾಗದಲ್ಲೂ ವ್ಯಾಪಕ ಮಳೆಯಾಗಿದೆ. ಮಿರಿಕ್, ಜೋರೆಬಂಗ್ಲೋ, ಮನೆಭಂಜಂಗ್, ಸುಖಿಯಾಪೊಕ್ರಿ ಮತ್ತು ಫಲಕಟಾದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಪ್ರವಾಸಿ ತಾಣ ಮಿರಿಕ್ ನಲ್ಲಿ ಭಾರಿ ಸಾವು ನೋವು ಸಂಭವಿಸಿದ್ದು, ಸಿಲಿಗುರಿ ಪಟ್ಟಣ ರಾಜ್ಯದ ಜತೆ ಸಂಪರ್ಕ ಕಡಿದುಕೊಂಡಿದೆ. ಸುಮೇಂಧು ಸರೋವರ ಮತ್ತು ಕಾಂಚನಜುಂಗಾ ವೀಕ್ಷಣಾ ವ್ಯವಸ್ಥೆಗೆ ಹೆಸರಾಗಿರುವ ಮಿರಿಕ್ ಪಟ್ಟಣದಲ್ಲಿ 13 ಮೃತದೇಹಗಳು ಪತ್ತೆಯಾಗಿವೆ. ಕೊಲ್ಕತ್ತಾದ ಹಿಮಾದ್ರಿ ಪುರಕಾಯೆತ್ ನಿಂದ ಆಗಮಿಸಿದ್ದ ಪ್ರವಾಸಿಗರು ಸೇರಿದಂತೆ 10 ಮಂದಿ ನಾಪತ್ತೆಯಾಗಿದ್ದಾರೆ. ಬೆಟ್ಟದ ತುದಿಯನ್ನು ರಕ್ಷಣಾ ತಂಡಗಳು ತಲುಪಿದಾಗ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸಿಲಿಗುರಿ ಮತ್ತು ಮಿರಿಕ್ ಪಟ್ಟಣಗಳ ನಡುವಿನ ಸಂಪರ್ಕದ ಏಕೈಕ ಕೊಂಡಿ ಎನಿಸಿದ್ದ ದೂಧಿಯಾ ಕಬ್ಬಿಣ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸುತ್ತಮುತ್ತಲಿನ ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಯಾಗಿವೆ. ಪುಲ್ ಬಝಾರ್ ನ ಮತ್ತೊಂದು ಸೇತುವೆಗೂ ವ್ಯಾಪಕ ಹಾನಿಯಾಗಿದ್ದು, ಬಿಂಜನ್‌ಬರಿ ಜತೆಗಿನ ಸಂಪರ್ಕ ಕಡಿತಗೊಂಡಿದೆ. ಡಾರ್ಜಿಲಿಂಗ್ ಮತ್ತು ಬಯಲು ಪ್ರದೇಶಗಳ ನಡುವಿನ ಸಂಪರ್ಕ ಕಂಡಿಯಾದ ರೋಹಿಣಿ ಸೇತುವೆಯೂ ನಾಶವಾಗಿದೆ. ಸಿಕ್ಕಿಮ್‌ಗೆ ಜೀವನಾಡಿ ಎನಿಸಿದ 10ನೇ ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿ ಭೂಕುಸಿತದಿಂದಾಗಿ ಹಾನಿಯಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಅನಿರ್ದಿಷ್ಟಾವಧಿಗೆ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿದೆ.