×
Ad

ರಾಷ್ಟ್ರಪತಿಗಳಿಂದ ಎನ್.ಟಿ.ರಾಮರಾವ್ ಸ್ಮರಣಾರ್ಥ ನಾಣ್ಯ ಬಿಡುಗಡೆ

Update: 2023-08-28 22:10 IST

Photo: twitter \ @PMuralidharRao

ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಇಲ್ಲಿ ಮೇರುನಟ ಹಾಗೂ ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆಗೊಳಿಸಿದರು.

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎನ್ಟಿಆರ್ ತೆಲುಗು ಚಿತ್ರಗಳ ಮೂಲಕ ಭಾರತೀಯ ಸಿನೆಮಾ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ತನ್ನ ನಟನೆಯ ಮೂಲಕ ಅವರು ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದರು. ಎನ್ಟಿಆರ್ ನಿರ್ವಹಿಸಿದ್ದ ರಾಮ ಮತ್ತು ಕೃಷ್ಣರ ಪಾತ್ರಗಳು ಎಷ್ಟೊಂದು ಜೀವಂತವಾಗಿತ್ತೆಂದರೆ ಜನರು ಅವರನ್ನು ಆರಾಧಿಸಲು ಆರಂಭಿಸಿದ್ದರು ಎಂದರು.

ಎನ್ಟಿಆರ್ ತನ್ನ ನಟನೆಯ ಮೂಲಕ ಜನಸಾಮಾನ್ಯರ ನೋವನ್ನೂ ವ್ಯಕ್ತಪಡಿಸಿದ್ದರು ಎಂದು ಹೇಳಿದ ರಾಷ್ಟ್ರಪತಿಗಳು, ಅವರು ತನ್ನ ‘ಮನುಷುಲಂತ ಒಕ್ಕಟೆ ’ ಚಿತ್ರದ ಮೂಲಕ ಎಲ್ಲ ಮಾನವರು ಸಮಾನರು ಎಂಬ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶವನ್ನು ಹರಡಿದ್ದರು ಎಂದು ನುಡಿದರು.

ಓರ್ವ ಸಾರ್ವಜನಿಕ ಸೇವಕನಾಗಿ ಮತ್ತು ಓರ್ವ ನಾಯಕನಾಗಿ ಎನ್ಟಿಆರ್ ಸಮಾನ ಜನಪ್ರಿಯತೆಯನ್ನು ಪಡೆದಿದ್ದರು ಎಂದ ಮುರ್ಮು,ಅವರು ತನ್ನ ಅಸಾಧಾರಣ ವ್ಯಕ್ತಿತ್ವ ಮತ್ತು ಕಠಿಣ ಶ್ರಮದ ಮೂಲಕ ಭಾರತೀಯ ರಾಜಕೀಯದಲ್ಲಿ ವಿಶಿಷ್ಟ ಅಧ್ಯಾಯವೊಂದನ್ನು ಸೃಷ್ಟಿಸಿದ್ದರು. ಅವರು ಹಲವಾರು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಆರಂಭಿಸಿದ್ದು, ಅವು ಇಂದಿಗೂ ನೆನಪಿಸಲ್ಪಡುತ್ತಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News