ಚೆನ್ನೈ | ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಅಗ್ನಿ ಅವಘಡ: ವಂದೇಭಾರತ್ ಸೇರಿ 8 ರೈಲುಗಳ ಸಂಚಾರ ರದ್ದು
Photo credit: X/@ajmalji
ಚೆನ್ನೈ: ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ರೈಲು ಟ್ಯಾಂಕರ್ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುವ ಪ್ರೀಮಿಯಮ್ ವಂದೇಭಾರತ್, ಶತಾಬ್ದಿ ಎಕ್ಸ್ ಪ್ರೆಸ್ ಸೇರಿದಂತೆ ಕನಿಷ್ಠ ಎಂಟು ರೈಲುಗಳ ಸಂಚಾರ ರದ್ದುಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರ ಮುಂಜಾನೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ರೈಲು ಟ್ಯಾಂಕರ್ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೈಲು ನಿಲ್ದಾಣದಲ್ಲಿ ದಟ್ಟ ಹೊಗೆ ಆವರಿಸಿದೆ ಎಂದು ವರದಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿದಂತೆ ಇತರ ರಕ್ಷಣಾ ತಂಡಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಚಾಲನೆ ನೀಡಿವೆ. ಶೀಘ್ರದಲ್ಲಿ ರೈಲು ಸಂಚಾರ ಪುನಾರಂಭಗೊಳ್ಳಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ, ಚೆನ್ನೈ-ಅರಕ್ಕೋಣಂ ವಿಭಾಗದ ಸ್ಥಳೀಯ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಸರಕು ಸಾಗಣೆ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ್ದರಿಂದ, ಟ್ಯಾಂಕರ್ ನಿಂದ ಇಂಧನ ಸೋರಿಕೆಯಾಗಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಹೇಳಲಾಗಿದೆ.