×
Ad

ಒಲಿಂಪಿಕ್ಸ್ ಹಾಕಿಯಲ್ಲಿ ಕಂಚಿನ ಪದಕ ವಿಜೇತ ವೇಸ್ ಪೇಸ್ ನಿಧನ

Update: 2025-08-14 11:07 IST

Image Credit: NDTV

ಹೊಸದಿಲ್ಲಿ, ಆ.14: 1972ರ ಆವೃತ್ತಿಯ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರು ಹಾಗೂ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರ ತಂದೆ ಡಾ.ವೇಸ್ ಪೇಸ್ ಅವರು ದೀರ್ಘ ಕಾಲದ ಅಸೌಖ್ಯದಿಂದಾಗಿ ಗುರುವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೇಸ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವುದಲ್ಲದೆ, ಕ್ರೀಡೆಯಲ್ಲೂ ನೈಪುಣ್ಯತೆ ಹೊಂದಿದ್ದ ಅಪರೂಪ ವ್ಯಕ್ತಿತ್ವದ ಡಾ. ಪೇಸ್ ಅವರು 1945ರಲ್ಲಿ ಗೋವಾದಲ್ಲಿ ಜನಿಸಿದ್ದರು.

ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಹಾಕಿ ಆಡಲು ಆರಂಭಿಸಿದ್ದ ಪೇಸ್ ಅವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ಭಾರತೀಯ ಹಾಕಿ ತಂಡದಲ್ಲಿ ಸ್ಥಾನ ಪಡೆದಿದ್ದರು. 1966ರಲ್ಲಿ ಹ್ಯಾಂಬರ್ಗ್ ಅಂತರರಾಷ್ಟ್ರೀಯ ಕಪ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು ಮೋಹನ್ ಬಗಾನ್ ಹಾಗೂ ಈಸ್ಟ್ ಬೆಂಗಾಳ್ ಸೇರಿದಂತೆ ಪ್ರಮುಖ ಫುಟ್ಬಾಲ್ ಕ್ಲಬ್‌ ನಲ್ಲೂ ಕೂಡ ಸೇವೆ ಸಲ್ಲಿಸಿದ್ದರು.

‘‘ಇಂದು ನಮಗೆ ದುಃಖದ ದಿನ. ಮ್ಯೂನಿಚ್‌ನಲ್ಲಿನ ಒಲಿಂಪಿಕ್ಸ್ ಪದಕವು ಅವರ ಧೈರ್ಯ ಹಾಗೂ ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಾನು ಅವರನ್ನು ಕೆಲವು ಬಾರಿ ಭೇಟಿಯಾಗುವ ಸೌಭಾಗ್ಯವನ್ನು ಪಡೆದಿದ್ದೆ. ಸಾಮಾನ್ಯವಾಗಿ ಕ್ರೀಡೆಗಳ ಬಗ್ಗೆ ಅವರ ಉತ್ಸಾಹದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಹಾಗೂ ಭಾರತದ ಮಾಜಿ ನಾಯಕ ದಿಲೀಪ್ ಟಿರ್ಕಿ ಹೇಳಿದ್ದಾರೆ.

ಡಾ.ಪೇಸ್ ಅವರು ವೈದ್ಯ ಮಾತ್ರವಲ್ಲದೆ, ಗೌರವಾನ್ವಿತ ಕ್ರೀಡಾ ವಿಜ್ಞಾನ ತಜ್ಞರಾಗಿದ್ದರು. ಅವರ ಪರಿಣತಿಯನ್ನು ತನ್ನ ಪುತ್ರ ಲಿಯಾಂಡರ್ ಪೇಸ್‌ ರಲ್ಲದೆ, ಟೆನಿಸ್, ಫುಟ್ಬಾಲ್ ಹಾಗೂ ಕ್ರಿಕೆಟಿನ ಪ್ರಮುಖ ಕ್ರೀಡಾಪಟುಗಳಿಗೆ ನೀಡಿದ್ದರು. ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಭಾರತೀಯ ಡೇವಿಸ್ ಕಪ್ ತಂಡ ಎರಡಕ್ಕೂ ವೈದ್ಯಕೀಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಬಿಸಿಸಿಐ ಹಾಗೂ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಗಾಗಿ ಡೋಪಿಂಗ್ ವಿರೋಧಿ ಶಿಕ್ಷಣ ಕಾರ್ಯಕ್ರಮಗಳನ್ನು ನಿರ್ವಹಿಸುವಲ್ಲಿ ಅವರ ಅನುಕರಣೀಯ ಕಾರ್ಯವು ವ್ಯಾಪಕ ಮನ್ನಣೆಯನ್ನು ಪಡೆದಿತ್ತು.

‘‘ನಾನು ನಾಯಕನಾಗಿದ್ದಾಗ ಅವರು ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅವರು ತಂಡದ ಉತ್ತಮ ಸದಸ್ಯರಾಗಿದ್ದರು. ಕ್ರಿಕೆಟ್, ಫುಟ್ಬಾಲ್ ಹಾಗೂ ರಗ್ಬಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿದ್ದರು. ನಾವಿಬ್ಬರೂ ಒಟ್ಟಿಗೆ 13 ವರ್ಷಗಳ ಕಾಲ ಮೋಹನ್ ಬಗಾನ್ ತಂಡದ ಪರ ಆಡಿದ್ದೇವೆ. 9 ಬೀಟನ್ ಕಪ್ ಹಾಗೂ 9 ಕಲ್ಕತ್ತಾ ಲೀಗ್ ಪ್ರಶಸ್ತಿಗಳನ್ನು ಗೆದ್ದಿದ್ದೇವೆ. 1968ರ ಒಲಿಂಪಿಕ್ಸ್‌ಗೆ ಅವರನ್ನು ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿತ್ತು. ಆದರೆ 1971ರ ವಿಶ್ವಕಪ್(ಆಗ ಭಾರತ ಕಂಚಿನ ಪದಕ ಗೆದ್ದಿತ್ತು)ಹಾಗೂ 1972ರ ಒಲಿಂಪಿಕ್ಸ್‌ ನಲ್ಲಿ ಅವರಿಗೆ ಅವಕಾಶಗಳು ಲಭಿಸಿದ್ದವು’’ ಎಂದು ಪೇಸ್ ಅವರ ದೀರ್ಘಕಾಲದ ಸ್ನೇಹಿತ ಹಾಗೂ 1964ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಗುರ್ಬಕ್ಸ್ ಸಿಂಗ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News