ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ : ವರದಿ
Photo | ANI
ಹೊಸದಿಲ್ಲಿ,ಅ.2: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಇತ್ತೀಚಿನ ವರದಿಯ ಪ್ರಕಾರ 2023ರಲ್ಲಿ ಪ್ರತಿ ಗಂಟೆಗೆ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು,ಇದು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಬಹಿರಂಗಪಡಿಸಿದೆ.
ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಹೆಚ್ಚಿನವರು(ಶೇ.38.5) ಮಹಾರಾಷ್ಟ್ರಕ್ಕೆ ಸೇರಿದ್ದು ಕರ್ನಾಟಕ(ಶೇ.22.5), ಆಂಧ್ರಪ್ರದೇಶ(ಶೇ.8.6),ಮಧ್ಯಪ್ರದೇಶ (ಶೇ.7.2) ಮತ್ತು ತಮಿಳುನಾಡು(ಶೇ.5.9) ನಂತರದ ಸ್ಥಾನಗಳಲ್ಲಿವೆ. ಈ ರಾಜ್ಯಗಳು ಒಂದು ಕಾಲದಲ್ಲಿ ಶ್ರೀಮಂತ ಕೃಷಿ ಪರಂಪರೆಯನ್ನು ಹೊಂದಿದ್ದವು, ಆದರೆ ಈಗ ಹತಾಶೆ ಮತ್ತು ಸಂಕಷ್ಟದಿಂದ ನಲುಗಿವೆ.
2023ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಒಟ್ಟು 10,786 ಜನರು ಆತ್ಮಹತ್ಯೆ ಮಾಡಿಕೊಂಡಿದ್ದು,ಇದು ದೇಶದಲ್ಲಿ ಒಟ್ಟು ಆತ್ಮಹತ್ಯೆಗಳ(1,71,418) ಶೇ.6.3ರಷ್ಟಿದೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ 4,553 ಪುರುಷರು ಮತ್ತು 137 ಮಹಿಳೆಯರು ಸೇರಿದಂತೆ 4,690(ಶೇ.43) ಜನರು ಕೃಷಿಕರಾಗಿದ್ದರೆ 6,096 ಜನರು ಕೃಷಿ ಕಾರ್ಮಿಕರಾಗಿದ್ದರು.
2023ರಲ್ಲಿ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ದಿಲ್ಲಿ ಮತ್ತು ಲಕ್ಷದ್ವೀಪಗಳಲ್ಲಿ ರೈತರ ಆತ್ಮಹತ್ಯೆಗಳು ವರದಿಯಾಗಿರಲಿಲ್ಲ.
2022ರಲ್ಲಿ ಕೃಷಿ ಕ್ಷೇತ್ರದಲ್ಲಿ 11,290 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ 4,999 ಪುರುಷರು ಮತ್ತು 208 ಮಹಿಳೆಯರು ಸೇರಿದಂತೆ 5,207 ರೈತರು ಹಾಗೂ 5,472 ಪುರುಷರು ಮತ್ತು 611 ಮಹಿಳೆಯರು ಸೇರಿದಂತೆ 6,083 ಕೃಷಿ ಕಾರ್ಮಿಕರು ಸೇರಿದ್ದರು.
2022ಕ್ಕೆ ಹೋಲಿಸಿದರೆ 2023ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆಯಲ್ಲಿ(1,71,418) ಶೇ.0.3ರಷ್ಟು ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ವರದಿಯು ತಿಳಿಸಿದೆ.