ಉಗ್ರ ದಾಳಿಯಲ್ಲಿ ಯೋಧರು ಹುತಾತ್ಮರಾಗಿದ್ದರೂ, ಪ್ರಧಾನಿ G20 ಯಶಸ್ಸಿನ ಸಂಭ್ರಮಾಚರಣೆಯಲ್ಲಿದ್ದಾರೆ: ವಿಪಕ್ಷಗಳ ಟೀಕೆ
Photo: Twitter/@BJP4India
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿಯಲ್ಲಿ ಭದ್ರತಾ ಪಡೆಗಳ ಮೂವರು ಸಿಬ್ಬಂದಿ ತಮ್ಮ ಪ್ರಾಣ ಕಳೆದುಕೊಂಡ ದುರಂತಮಯ ದಿನವೊಂದರಲ್ಲಿ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತನ್ನ ಮುಖ್ಯ ಕಾರ್ಯಾಲಯದಲ್ಲಿ ಜಿ20 ಶೃಂಗಸಭೆಯ ಯಶಸ್ಸನ್ನು ಆಚರಿಸಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಬಿಜೆಪಿ ಮತ್ತು ಪ್ರಧಾನಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್ ಪಕ್ಷ, ಪ್ರಧಾನಿಯ ಅಸಂವೇದಿತನವನ್ನೂ ಟೀಕಿಸಿದೆ.
ಕಾಂಗ್ರೆಸ್ ಮಾಧ್ಯಮ ಘಟಕದ ಮುಖ್ಯಸ್ಥ ಪವನ್ ಖೇರಾ ಪ್ರತಿಕ್ರಿಯಿಸಿ, “ಏನೇ ಆದರೂ ಚಿಂತೆಯಿಲ್ಲ, ಪ್ರಧಾನಿ ಪ್ರಶಂಸೆಗಳನ್ನು ಸ್ವೀಕರಿಸುವುದನ್ನು ಮುಂದೂಡುವುದಿಲ್ಲ,” ಎಂದು ಬರೆದಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಠೆ ಈ ಕುರಿತು ಟ್ವೀಟ್ ಮಾಡಿದ್ದಾರೆ ಹಾಗೂ ಪುಲ್ವಾಮದ ದಾಳಿಯನ್ನು ಉಲ್ಲೇಖಿಸಿ ಆ ದಾಳಿ ಬಗ್ಗೆ ಬಹಳ ಹೊತ್ತಿನ ತಕ ಪ್ರಧಾನಿಗೆ ತಿಳಿದಿರಲಿಲ್ಲ ಎಂಬ ಬಿಜೆಪಿಯ ವಾದವನ್ನು ನೆನಪಿಸಿಕೊಂಡರಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲವೂ ತಿಳಿದಿದ್ದರೂ ಸಂಭ್ರಮಾಚರಣೆ ನಡೆದಿದೆ ಎಂದಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಪ್ರತಿಕ್ರಿಯಿಸಿ, “ಇದನ್ನು ಮುಂದೂಡಬಹುದಾಗಿತ್ತು, ಹೆಚ್ಚು ಸಂವೇದಿತನವನ್ನು ನಿರೀಕ್ಷಿಸಿದ್ದೆ. ಮುಖ್ಯವಾಗಿ ನಮ್ಮ ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗ, ಈಗಾಗಲೇ ನಮ್ಮ ಮೂವರು ಶೂರರು ಪ್ರಾಣ ತೆತ್ತಿದ್ದಾರೆ,” ಎಂದು ಬರೆದಿದ್ದಾರೆ.