ಆಪರೇಶನ್ ಸಿಂಧೂರ | 18 ವಿಮಾನ ನಿಲ್ದಾಣ ತಾತ್ಕಾಲಿಕ ಬಂದ್, 200ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು
ಸಾಂದರ್ಭಿಕ ಚಿತ್ರ | indiatoday
ಹೊಸದಿಲ್ಲಿ : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯ ಬಳಿಕ ಬುಧವಾರ 200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಯಿತು. ಶ್ರೀನಗರ, ಲೇಹ್, ಅಮೃತಸರ ಮತ್ತು ಚಂಡೀಗಢ ಸೇರಿದಂತೆ ಕನಿಷ್ಠ 18 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರಲ್ಲಿ ಜೈಶೆ ಮೊಹಮ್ಮದ್‌ನ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಲಷ್ಕರೆ ತೈಬಾದ ಮುರಿಡ್ಕೆ ನೆಲೆ ಸೇರಿವೆ.
ಜಮ್ಮು, ಪಠಾಣ್‌ಕೋಟ್, ಜೋಧ್ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ ಹಲವು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಹಲವಾರು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿವೆ.
ಇಂಡಿಗೋ ಸುಮಾರು 160 ವಿಮಾನಗಳ ಸೇವೆಯನ್ನು ರದ್ದುಗೊಳಿಸಿದೆ. ದೇಶದ ಅತಿದೊಡ್ಡ ಮತ್ತು ಜನನಿಬಿಡ ವಿಮಾನ ನಿಲ್ದಾಣವಾದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಅಲ್ಲಿಂದ ತೆರಳುವ ಕನಿಷ್ಠ 35 ವಿಮಾನಗಳನ್ನು ಬೆಳಗ್ಗೆ 12 ಗಂಟೆಯಿಂದ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.