ಪಹಲ್ಗಾಮ್ ಉಗ್ರರ ಕೃತ್ಯಕ್ಕೆ ನೆರವಾಗಿದ್ದ ಆರೋಪ; ವ್ಯಕ್ತಿ ನದಿಗೆ ಹಾರಿ ಮೃತ್ಯು
PC: screengrab/ x.com/MUZUFARKHAN
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗೆ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರಗಾಮಿಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ನದಿಗೆ ಹಾರಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.
ವ್ಯಕ್ತಿಯೊಬ್ಬರು ಎತ್ತರದ ಪ್ರದೇಶದಿಂದ ಚಿತ್ರೀಕರಿಸಿದ ಘಟನೆಯ ವಿಡಿಯೊದಲ್ಲಿ ಕಂಡುಬಂದಿರುವಂತೆ ಇಮ್ತಿಯಾಜ್ ಮ್ಯಾಗ್ರೇ (23) ಕಲ್ಲು ಬಂಡೆಗಳಿಂದ ತುಂಬಿದ್ದ ನದಿಗೆ ದಿಢೀರನೇ ಹಾರುತ್ತಿರುವುದು ದಾಖಲಾಗಿದೆ.
ಶನಿವಾರ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ಹೇಳಿವೆ. ವಿಚಾರಣೆ ನಡೆಸುವ ವೇಳೆ ಕುಲಗಾಮ್ ನ ತಂಗ್‌ಮಾರ್ಗ್ ಕಾಡಿನಲ್ಲಿ ಉಗ್ರರಿಗೆ ಆಹಾರ ಮತ್ತು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮ್ಯಾಗ್ರೇ ಉಗ್ರರ ಅಡಗುದಾಣವನ್ನು ತೋರಿಸುವುದಾಗಿ ಪೊಲೀಸರನ್ನು ನಂಬಿಸಿದ್ದ. ಭಾನುವಾರ ಮುಂಜಾನೆ ಪೊಲೀಸರು ಮತ್ತು ಸೇನೆಯ ಜಂಟಿ ತಂಡ ಅಡಗುದಾಣದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮ್ಯಾಗ್ರೇ ವೆಶಾವ್ ನದಿಗೆ ಹಾರಿದ ಎಂದು ಮೂಲಗಳು ಹೇಳಿವೆ.
ಆತ ತಪ್ಪಿಸಿಕೊಳ್ಳುವ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನದಿಗೆ ಹಾರುವ ಸಂದರ್ಭದಲ್ಲಿ ಯಾರೂ ಈತನ ಬಳಿ ಇರಲಿಲ್ಲ. ನದಿಯಲ್ಲಿ ಈಜಲು ಪ್ರಯತ್ನಿಸಿದರೂ, ನೀರಿನ ಸೆಳೆತದಿಂದ ಆತ ಕೊಚ್ಚಿಕೊಂಡು ಹೋಗಿದ್ದು, ಮುಳುಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ವಿಡಿಯೊ ಮೂಲಕ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಈ ವ್ಯಕ್ತಿಯ ಸಾವಿಗೆ ಭದ್ರತಾ ಪಡೆಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿವೆ. ಮ್ಯಾಗ್ರೇ ಸಾವಿನ ಹಿಂದೆ ಪಿತೂರಿ ಇದೆ ಎಂದು ಮಾಜಿ ಸಿಎಂ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆಪಾದಿಸಿದ್ದಾರೆ.