ಪಹಲ್ಗಾಮ್‌ನಲ್ಲಿ ನಾಗರಿಕರ ಹತ್ಯೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ್ದ ಭಯೋತ್ಪಾದಕರು : ಪ್ರತ್ಯಕ್ಷದರ್ಶಿ
Photo | PTI
ಹೊಸದಿಲ್ಲಿ : ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ 26 ನಾಗರಿಕರನ್ನು ಹತ್ಯೆ ಮಾಡಿದ ಬಳಿಕ ಭಯೋತ್ಪಾದಕರು ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿ ಸಂಭ್ರಮಿಸಿರುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೋರ್ವರು ತನಿಖಾಧಿಕಾರಿಗಳಿಗೆ ತಿಳಿಸಿರುವ ಬಗ್ಗೆ indiatoday ವರದಿ ಮಾಡಿದೆ.
ತನಿಖೆಯ ವೇಳೆ NIA ಓರ್ವ ಸ್ಥಳೀಯ ವ್ಯಕ್ತಿಯನ್ನು ಪ್ರಮುಖ ಸಾಕ್ಷಿ ಎಂದು ಗುರುತಿಸಿತ್ತು. ದಾಳಿಯ ನಂತರದ ನಿಮಿಷಗಳಲ್ಲಿ ಏನಾಯಿತು ಎಂದು ಆ ಪ್ರತ್ಯಕ್ಷದರ್ಶಿ ತನಿಖಾಧಿಕಾರಿಗಳಿಗೆ ವಿವರಿಸಿದ್ದಾನೆ ಎಂದು ವರದಿಯಾಗಿದೆ.
ʼದಾಳಿಯ ನಂತರ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕಿಸ್ತಾನ ಮೂಲದ ಮೂವರು ಭಯೋತ್ಪಾದಕರನ್ನು ನೋಡಿದ್ದೇನೆ. ಬಂದೂಕುದಾರಿಗಳು ತಮ್ಮ ಘೋರ ಕೃತ್ಯವನ್ನು ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿ ಸಂಭ್ರಮಿಸಿದ್ದಾರೆʼ ಎಂದು ಪ್ರತ್ಯಕ್ಷದರ್ಶಿಯೋರ್ವ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
ದಾಳಿಕೋರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಎನ್ಐಎ ಇಬ್ಬರು ಸ್ಥಳೀಯ ಆರೋಪಿಗಳಾದ ಪರ್ವೈಝ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ನನ್ನು ಬಂಧಿಸಿತ್ತು. ಅವರು ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತುಗಳನ್ನು ಅಧಿಕಾರಿಗಳಿಗೆ ಬಹಿರಂಗಪಡಿಸಿದ್ದರು.