ಭಾರತ-ಪಾಕಿಸ್ತಾನ ಪಂದ್ಯ | ಬಿಸಿಸಿಐ ಅನ್ನು ತರಾಟೆಗೆ ತೆಗೆದುಕೊಂಡ ಪಹಲ್ಗಾಮ್ ಸಂತ್ರಸ್ತನ ಪತ್ನಿ : ಪಂದ್ಯ ರದ್ದುಗೊಳಿಸುವಂತೆ ಆಗ್ರಹ
Photo : Reuters
ಲಕ್ನೊ: ಏಶ್ಯ ಕಪ್ 2025ರ ಭಾಗವಾಗಿ ಯುಎಇಯಲ್ಲಿ ಆಯೋಜನೆಗೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವಿರುದ್ಧ ಬಿಸಿಸಿಐ ಅನ್ನು ಶನಿವಾರ ತರಾಟೆಗೆ ತೆಗೆದುಕೊಂಡಿರುವ ಪಹಲ್ಗಾಮ್ ಸಂತ್ರಸ್ತರೋರ್ವರ ಪತ್ನಿ, ಜನರು ಈ ಪಂದ್ಯವನ್ನು ಬಹಿಷ್ಕರಿಸಬೇಕು ಹಾಗೂ ಟಿವಿಯಲ್ಲಿ ವೀಕ್ಷಿಸಬಾರದು ಎಂದು ಆಗ್ರಹಿಸಿದ್ದಾರೆ.
ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರಿಂದ ಹತರಾದ 26 ಮಂದಿ ಪ್ರವಾಸಿಗರ ಪೈಕಿ ಒಬ್ಬರಾಗಿದ್ದ ಕಾನ್ಪುರ ಮೂಲದ ಉದ್ಯಮಿ ಶುಭಂ ದ್ವಿವೇದಿಯ ಪತ್ನಿಯಾದ ಅಶನ್ಯ ದ್ವಿವೇದಿ ಅವರು, “ಈ ಪಂದ್ಯವು ಪಹಲ್ಗಾಮ್ ಹುತಾತ್ಮರಿಗೆ ತೋರುವ ಅಗೌರವವಾಗಿದೆ” ಎಂದು ಟೀಕಿಸಿದ್ದಾರೆ.
“ಇದು ಸಂತ್ರಸ್ತರ ಕುಟುಂಬಗಳ ಗಾಯದ ಮೇಲೆ ಉಪ್ಪು ಸವರಿಸಿದಂತೆ. ಜನರು ಈ ಪಂದ್ಯವನ್ನು ಬಹಿಷ್ಕರಿಸಬೇಕು ಹಾಗೂ ಟಿವಿಯಲ್ಲೂ ವೀಕ್ಷಿಸಬಾರದು. ನೀವು ಕ್ರೀಡಾಂಗಣಕ್ಕೆ ಹೋಗಬೇಡಿ” ಎಂದು ಅವರು ಕರೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ಏರ್ಪಡಿಸಲು ಸಮ್ಮತಿಸಿದ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿರುವ ಅಶನ್ಯ ದ್ವಿವೇದಿ, “ಬಿಸಿಸಿಐಗೆ ಸಂವೇದನೆಯಿಲ್ಲ ಹಾಗೂ ಪಹಲ್ಗಾಮ್ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ಯಾವುದೇ ಗೌರವವಿಲ್ಲ ಎಂದು ನನಗನ್ನಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಎಪ್ರಿಲ್ 25ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಹತ್ಯೆಗೀಡಾಗಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು.