ಪಹಲ್ಗಾಮ್‌ನಲ್ಲಿ ಸಾಹಸ ಪ್ರದರ್ಶಿಸದ ಮಹಿಳೆಯರಿಂದಾಗಿ 26 ಮಂದಿಯ ಹತ್ಯೆ: ಬಿಜೆಪಿ ಸಂಸದ ಜಾಂಗ್ರಾ ವಿವಾದಾತ್ಮಕ ಹೇಳಿಕೆ
PC: x.com/thetribunechd
ಗುರುಗ್ರಾಮ: ಶೌರ್ಯ ತೋರುವ ಸ್ಫೂರ್ತಿಯ ಕೊರತೆಯಿಂದಾಗಿ 26 ಮಂದಿ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಎಂದು ರಾಜ್ಯಸಭಾ ಸದಸ್ಯ ರಾಮಚಂದ್ರ ಜಾಂಗ್ರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಗ್ನಿವೀರ ಯೋಜನೆಯಡಿ ಸೂಕ್ತ ತರಬೇತಿ ಪಡೆದಿದ್ದರೆ, ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
"ತಮ್ಮ ಗಂಡಂದಿರನ್ನು ದಾಳಿಯಲ್ಲಿ ಕಳೆದುಕೊಂಡ ಮಹಿಳೆಯರು ಸಾಹಸ ಮನೋಭಾವವನ್ನು ಪ್ರದರ್ಶಿಸಲಿಲ್ಲ. ಇದರಿಂದಾಗಿ ಗುಂಡಿನ ದಾಳಿಗೆ 26 ಮಂದಿ ಬಲಿಯಾದರು ಎಂದು ಬಿಜೆಪಿ ಸರ್ಕಾರದ ಅಹಲ್ಯಾಬಾಯಿ ಹೋಳ್ಕರ್ ತ್ರಿಶಮಾನ ಸ್ಮಾರಕ ಅಭಿಯಾನ ಸಮಾರಂಭದಲ್ಲಿ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.
ಪ್ರವಾಸಿಗರು ದೈನ್ಯತೆಯಿಂದ ಇದ್ದ ಕಾರಣ ಹತ್ಯೆಗೀಡಾದರು. ಪ್ರಧಾನಿಯವರ ಯೋಜನೆಯಡಿ ತರಬೇತಿ ಪಡೆದು ದಾಳಿಕೋರರ ಜತೆ ಸಂಘರ್ಷಕ್ಕೆ ಇಳಿದಿದ್ದರೆ, ಅಷ್ಟು ಸಂಖ್ಯೆಯಲ್ಲಿ ಸಾವು ಸಂಭವಿಸುತ್ತಿರಲಿಲ್ಲ. ಪ್ರವಾಸಿಗರು ಮೂಲ ಸಲಕರಣೆಗಳಾದ ಬಡಿಗೆಯನ್ನು ಹೊಂದಿ, ದಾಳಿಕೋರರ ವಿರುದ್ಧ ಹೋರಾಟ ನಡೆಸಿದ್ದರೆ, ಸಾವಿನ ಸಂಖ್ಯೆ ಐದರಿಂದ ಆರಷ್ಟೇ ಆಗುತ್ತಿತ್ತು. ಮೂವರು ಉಗ್ರರನ್ನು ಸಾಯಿಸಬಹುದಿತ್ತು ಎಂದರು.
ಜಾಂಗ್ರ ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದ್ದು, ತನ್ನ ಪತಿಯನ್ನು ದಾಳಿಯಲ್ಲಿ ಕಳೆದುಕೊಂಡ ಮಹಿಳೆಗೆ ಮಾಡಿದ ಘೋರ ಅವಮಾನ ಇದಾಗಿದೆ ಎಂದು ಆರೋಪಿಸಿದೆ.