ಹರ್ಯಾಣ | ನೀರಿನಲ್ಲಿ ಮುಳುಗಿಸಿ ತನ್ನ ಪುತ್ರ ಸೇರಿ ನಾಲ್ವರು ಮಕ್ಕಳನ್ನು ಹತ್ಯೆಗೈದ ಮಹಿಳೆ!
ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂದು ಹತ್ಯೆ ನಡೆಸುತ್ತಿದ್ದ ಆರೋಪಿ
Photo Credit : NDTV
ಪಾಣಿಪತ್ (ಹರ್ಯಾಣ): ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂಬ ವಿಕೃತಿಯಿಂದ ಮಹಿಳೆಯೊಬ್ಬಳು ಆರು ವರ್ಷದ ತನ್ನ ಸಹೋದರನ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿರುವ ಘಟನೆ ಹರ್ಯಾಣದ ಪಾಣಿಪತ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಈ ಹತ್ಯೆಯ ಬೆನ್ನಿಗೇ ಆಕೆ ಇನ್ನೂ ಮೂವರು ಮಕ್ಕಳನ್ನು ಇದೇ ರೀತಿ ಹತ್ಯೆಗೈದಿರುವುದು ಬೆಳಕಿಗೆ ಬಂದಿದ್ದು, ಈ ಪೈಕಿ ಆಕೆ ತನ್ನ ಪುತ್ರನನ್ನೇ ಹತ್ಯೆಗೈದಿದ್ದ ಮೈನಡುಗಿಸುವ ಸತ್ಯವೂ ಬೆಳಕಿಗೆ ಬಂದಿದೆ.
ಈ ಕೃತ್ಯ ಎಸಗಿದ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದ್ದು, ಆಕೆ ಸೋಮವಾರದಂದು ತನ್ನ ಆರು ವ ರ್ಷದ ಸಹೋದರನ ಪುತ್ರಿಯನ್ನು ಟಬ್‌ನಲ್ಲಿ ಮುಳುಗಿಸಿ, ಹತ್ಯೆಗೈದಿದ್ದಾಳೆ ಎಂದು ಆರೋಪಿಸಲಾಗಿದೆ. ಈ ವೇಳೆ ಆಕೆಯ ಇಡೀ ಕುಟುಂಬ ಮದುವೆ ಸಮಾರಂಭದ ಸಂಭ್ರಮದಲ್ಲಿ ಮುಳುಗಿತ್ತು ಎನ್ನಲಾಗಿದೆ.
ಮೃತ ಬಾಲಕಿಯನ್ನು ವಿಧಿ ಎಂದು ಗುರುತಿಸಲಾಗಿದ್ದು, ಆಕೆ ಸೋಮವಾರ ಪಾಣಿಪತ್ ಜಿಲ್ಲೆಯ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಳು ಎನ್ನಲಾಗಿದೆ. ಆಕೆ ತನ್ನ ತಾತ ಪಾಲ್ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ್ ಹಾಗೂ 10 ತಿಂಗಳ ಕಿರಿಯ ತಮ್ಮನೊಂದಿಗೆ ಅಲ್ಲಿಗೆ ಆಗಮಿಸಿದ್ದಳು ಎನ್ನಲಾಗಿದೆ.
ಸೋಮವಾರ ವಿವಾಹ ಮೆರವಣಿಗೆಯು ನೌಲ್ತಾಗೆ ಆಗಮಿಸಿ, ರಾತ್ರಿ ಸುಮಾರು 1.30ರ ವೇಳೆಗೆ ಆಕೆಯ ಕುಟುಂಬದ ಸದಸ್ಯರು ಅಲ್ಲಿಂದ ತೆರಳಿದ ನಂತರ ಈ ಘಟನೆ ನಡೆದಿದೆ.
ಕೆಲವೇ ಕ್ಷಣಗಳಲ್ಲಿ ವಿಧಿ ನಾಪತ್ತೆಯಾಗಿದ್ದಾಳೆ ಎಂಬ ದೂರವಾಣಿ ಕರೆಯನ್ನು ಆಕೆಯ ತಂದೆ ಸ್ವೀಕರಿಸಿದ್ದಾರೆ. ಅದರ ಬೆನ್ನಿಗೇ ಕುಟುಂಬದ ಸದಸ್ಯರು ಆಕೆಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಸುಮಾರು ಒಂದು ಗಂಟೆಯ ನಂತರ, ವಿಧಿಯ ಅಜ್ಜಿ ಓಂವತಿ ತಮ್ಮ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್ ರೂಂಗೆ ಹೋಗಿದ್ದಾರೆ. ಆ ಸ್ಟೋರ್ ರೂಂಗೆ ಹೊರಗಿನಿಂದ ಚಿಲಕ ಹಾಕಿರುವುದು ಅವರ ಕಣ್ಣಿಗೆ ಬಿದ್ದಿದೆ. ಅವರು ಅದನ್ನು ತೆರೆದಾಗ, ವಿಧಿಯ ತಲೆ ನೀರಿನ ಟಬ್‌ನಲ್ಲಿ ಮುಳುಗಿರುವುದು ಹಾಗೂ ಪಾದ ನೆಲದ ಮೇಲಿರುವುದು ಕಂಡು ಬಂದಿದೆ.
ತಕ್ಷಣವೇ ಬಾಲಕಿ ವಿಧಿಯನ್ನು ಆಸ್ಪತ್ರೆಗೆ ಸಾಗಿಸಿದರೂ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಬಳಿಕ ವಿಧಿಯನ್ನು ಹತ್ಯೆಗೈಯ್ಯಲಾಗಿದೆ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಪೂನಂ, ವಿಧಿಯ ಅತ್ತೆ ಎಂಬ ಸಂಗತಿ ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿ ಪೂನಂ ಮತ್ಸರ ಹಾಗೂ ಹಗೆತನದಿಂದ ಒಂದೇ ಬಗೆಯಲ್ಲಿ ಹತ್ಯೆ ನಡೆಸುತ್ತಿದ್ದಳು ಹಾಗೂ ಸುಂದರ ಕಿರಿಯ ಮಕ್ಕಳನ್ನೇ ಈ ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದಳು.ಆಕೆ ತನಗಿಂತ ಬೇರೆ ಯಾರೂ ಸುಂದರವಾಗಿರುವುದನ್ನು ಸಹಿಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆಯ ವೇಳೆ, ಆಕೆ ತನ್ನ ಪುತ್ರ ಸೇರಿದಂತೆ ಒಟ್ಟು ನಾಲ್ಕು ಮಕ್ಕಳನ್ನು ಒಂದೇ ರೀತಿಯಲ್ಲಿ ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.