ಪತನಕ್ಕೂ ಮೊದಲೇ ಏರ್‌ಇಂಡಿಯಾ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ವೀಡಿಯೊದಲ್ಲಿ ಹೇಳಿಕೊಂಡಿದ್ದ ಪ್ರಯಾಣಿಕ!
ಅಹ್ಮದಾಬಾದ್ : ಏರ್‌ಇಂಡಿಯಾ AI171 ವಿಮಾನ ದುರಂತಕ್ಕೆ ಎರಡು ಗಂಟೆಗಳ ಮೊದಲು ಅದೇ ವಿಮಾನದಲ್ಲಿ ದಿಲ್ಲಿಯಿಂದ ಅಹ್ಮದಾಬಾದ್‌ಗೆ ಪ್ರಯಾಣಿಸಿದ್ದ ಆಕಾಶ್ ವತ್ಸಾ ಎಂಬ ಪ್ರಯಾಣಿಕ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದರು. ವಿಮಾನ ದುರಂತದ ಬೆನ್ನಲ್ಲೇ ಇದು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಮಾನದಲ್ಲಿನ ತಾಂತ್ರಿಕ ದೋಷಗಳ ಬಗ್ಗೆ ಆಕಾಶ್ ವತ್ಸಾ ಫೇಸ್ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ತನ್ನ ಪ್ರಯಾಣದ ವೇಳೆ ಹವಾನಿಯಂತ್ರಕ(ಎಸಿ) ಕಾರ್ಯನಿರ್ವಹಿಸುತ್ತಿಲ್ಲ, ಸಿಬ್ಬಂದಿಯನ್ನು ಕರೆಯುವ ಬಟನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಸೇರಿದಂತೆ ವಿಮಾನದಲ್ಲಿನ ಹಲವಾರು ತಾಂತ್ರಿಕ ದೋಷವನ್ನು ಬಹಿರಂಗಪಡಿಸಿದ್ದರು. ಎಸಿ ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ನಿಯತಕಾಲಿಕೆಗಳು, ಪೇಪರ್‌ಗಳು ಗಾಳಿ ಹಾಕುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
ಏರ್ ಇಂಡಿಯಾವನ್ನು ಎಚ್ಚರಿಸುವ ಉದ್ದೇಶದಿಂದ ಆಕಾಶ್ ಈ ಸಮಸ್ಯೆಗಳ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದರು. ಆದರೆ, ನಂತರ ಅವರು ತಮ್ಮ ಪೋಸ್ಟ್‌ಗಳನ್ನು ಅಳಿಸಿದ್ದರು.
ಅಹ್ಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹೋಗುವ ಮಾರ್ಗದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿ 241 ಮಂದಿ ಮೃತಪಟ್ಟಿದ್ದರಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಕಾಶ್ ಅವರ ವೀಡಿಯೊ ಮತ್ತು ಸಾಕ್ಷ್ಯವು ವಿಮಾನದಲ್ಲಿ ಸಮಸ್ಯೆಗಳಿತ್ತು ಎಂಬುದನ್ನು ಬಹಿರಂಗಪಡಿಸುತ್ತದೆ.