ಪ್ರತಿ ಬಾರಿ ಚುನಾವಣೆ ನಡೆದಾಗಲೂ ಮತದಾರ ಪಟ್ಟಿ ಪರಿಷ್ಕರಣೆಯಾಗಲಿ: ಸುಪ್ರೀಂ ಕೋರ್ಟ್ ಗೆ ಅರ್ಜಿ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ದೇಶದಲ್ಲಿ ಪ್ರತೀ ಬಾರಿ ಚುನಾವಣೆ ನಡೆದಾಗಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಅಶ್ವಿನಿ ಉಪಾಧ್ಯಾಯ ಅವರು, ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿರುವ ಅರ್ಜಿಗಳ ಜೊತೆಯೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬೇಕೆಂದು ನ್ಯಾಯಮೂರ್ತಿಗಳಾದ ಸುಧಾಂಶು ದುಲಿಯಾ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವನ್ನು ಮಂಗಳವಾರ ಕೋರಿದ್ದಾರೆ.
ಪ್ರತಿ ಲೋಕಸಭೆ ಮತ್ತು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಜುಲೈ 10ರಂದು ವಿಚಾರಣೆ ನಡೆಸಲಿದೆ.
ಚುನಾವಣೆಗಳ ಮೂಲಕವೇ ದೇಶವು ತನ್ನ ರಾಜಕೀಯ ವ್ಯವಸ್ಥೆ ಮತ್ತು ನೀತಿಗಳನ್ನು ರೂಪಿಸುತ್ತದೆ. ನೈಜ ಪ್ರಜೆಗಳು ಮಾತ್ರ ಮತದಾನದ ಹಕ್ಕು ಹೊಂದಿರಬೇಕು ಎನ್ನುವುದನ್ನು ಖಚಿತಪಡಿಸುವುದು ಕೇಂದ್ರ, ರಾಜ್ಯಗಳು ಮತ್ತು ಚುನಾವಣಾ ಆಯೋಗದ ಕರ್ತವ್ಯ. ಹೀಗಾಗಿ ಕಾಲಕಾಲಕ್ಕೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಅತ್ಯಗತ್ಯ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಪರಿಷ್ಕರಣೆ ಅಗತ್ಯ. ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿಯೂ 8000–10,000 ಅಕ್ರಮ, ನಕಲಿ ಮತದಾರರು ಸೇರಿಕೊಂಡಿದ್ದಾರೆ. ಕನಿಷ್ಠ 2,000–3000 ಮತಗಳ ವ್ಯತ್ಯಾಸವೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಿವರಿಸಿದ್ದಾರೆ.
ದೇಶದ ಆಡಳಿತ ಚುಕ್ಕಾಣಿ ಯಾರು ಹಿಡಿಯಬೇಕೆಂದು ನೈಜ ಭಾರತೀಯ ಪ್ರಜೆಗಳು ಮಾತ್ರ ನಿರ್ಧಾರ ಮಾಡಬೇಕೇ ವಿನಾ ವಿದೇಶಿ ಅಕ್ರಮ ನುಸುಳುಕೋರರಲ್ಲ. ಹೀಗಾಗಿ ಪ್ರತಿ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.