×
Ad

ಅವರನ್ನು ಈಗ ಯಾರು ನಂಬುತ್ತಾರೆ?: ಕದನ ವಿರಾಮ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಪಕ್ಷ ತಿರಸ್ಕಾರ

Update: 2025-06-18 20:57 IST

 ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ | PC : X 

ಹೊಸದಿಲ್ಲಿ: ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ಸಮಯದಲ್ಲಿ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆಯ ಕುರಿತು ಯಾವುದೇ ಚರ್ಚೆಗಳು ನಡೆದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ 35 ನಿಮಿಷಗಳ ದೂರವಾಣಿ ಮಾತುಕತೆಗಳ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂಬ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯು ಪ್ರತಿಪಕ್ಷಗಳ ಮೇಲೆ ಯಾವುದೇ ಪ್ರಭಾವ ಬೀರುವಲ್ಲಿ ವಿಫಲಗೊಂಡಿದೆ.

ಕದನ ವಿರಾಮ ಕುರಿತು ಮೋದಿ ಹೇಳಿದ್ದನ್ನು ಈಗ ಯಾರು ನಂಬುತ್ತಾರೆ? ಟ್ರಂಪ್ ಆ ಬಗ್ಗೆ ಟ್ವೀಟ್ ಮಾಡಬೇಕು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವುತ್ ಕುಟುಕಿದ್ದಾರೆ.

ಟ್ರಂಪ್ ಜೊತೆ ಮೋದಿ ಮಾತುಕತೆ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಹಾಗೂ ಕಾಂಗ್ರೆಸ್ ಪ್ರ.ಕಾರ್ಯದರ್ಶಿ(ಸಂವಹನ) ಜೈರಾಮ ರಮೇಶ ಅವರು,ಈ ವಿಷಯದಲ್ಲಿ ಇಷ್ಟೊಂದು ಸುದೀರ್ಘ ಕಾಲ ಪ್ರಧಾನಿಯವರ ಮೌನವನ್ನು ಪ್ರಶ್ನಿಸಿದರು. ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಲು ಪ್ರಧಾನಿ ಸರ್ವಪಕ್ಷ ಸಭೆಯನ್ನು ಕರೆಯಬೇಕೆಂದೂ ಅವರು ಆಗ್ರಹಿಸಿದರು.

‘ಮೋದಿ 35 ದಿನಗಳ ಕಾಲ ಏನನ್ನೂ ಹೇಳಿರಲಿಲ್ಲ. ಅವರು ಟ್ರಂಪ್ ಜೊತೆ 35 ನಿಮಿಷಗಳ ಕಾಲ ಮಾತನಾಡಿದರು ಎಂದು ಇಂದು ನಮಗೆ ತಿಳಿಸಲಾಗಿದೆ. ಮೋದಿಯವರು ಟ್ರಂಪ್‌ಗೆ ಏನು ತಿಳಿಸಿದ್ದಾರೆ ಎಂಬ ಬಗ್ಗೆ ಹೇಳಿಕೆಯೊಂದನ್ನು ನೀಡಲಾಗಿದೆ. ಟ್ರಂಪ್ ಅವರೂ ಶ್ವೇತಭವನದಿಂದ ಹೇಳಿಕೆಯೊಂದನ್ನು ಹೊರಡಿಸಿದ್ದಾರೆ. ಈ ಎರಡೂ ಹೇಳಿಕೆಗಳಲ್ಲಿ ವ್ಯತ್ಯಾಸವಿದೆ. ಪಾಕ್ ಜೊತೆಗಿನ ಸಮಸ್ಯೆಗಳಲ್ಲಿ ಅಮೆರಿಕಕ್ಕೆ ಯಾವುದೇ ಪಾತ್ರವಿಲ್ಲ ಮತ್ತು ಈ ವಿಷಯದಲ್ಲಿ ಯಾವುದೇ ಮಧ್ಯಸ್ಥಿಕೆಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಮೋದಿ ಟ್ರಂಪ್‌ಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಧಾನಿ 37 ದಿನಗಳ ಕಾಲ ಮೌನವಾಗಿದ್ದರು ಮತ್ತು ಅವರು ಟ್ರಂಪ್ ಅವರಿಗೆ ಹೇಳಿದ್ದಾರೆ ಎನ್ನಲಾಗಿರುವುದನ್ನು ನಾವು ನಂಬಬೇಕೆಂದು ಇಂದು ನಮಗೆ ಸೂಚಿಸಲಾಗುತ್ತಿದೆ. ಮೋದಿಯವರು ನಾಳೆ ಅಥವಾ ನಾಳಿದ್ದು ಸರ್ವಪಕ್ಷ ಸಭೆಯನ್ನೇಕೆ ಕರೆಯಲೇಕೆ ಸಾಧ್ಯವಿಲ್ಲ? ಪ್ರತಿಪಕ್ಷಗಳನ್ನು ಮತ್ತು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಮತ್ತು ಇಂದು ವಿದೇಶಾಂಗ ಕಾರ್ಯದರ್ಶಿಗಳು ಬಹಿರಂಗಗೊಳಿಸಿದ ವಿಷಯವನ್ನೇ ಹೇಳಿ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಮೇಶ ಹೇಳಿದರು.

ಗಮನಾರ್ಹವಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಸಂಭಾಷಣೆಯ ಕುರಿತು ಶ್ವೇತಭವನದ ಅಧಿಕೃತ ಹೇಳಿಕೆಗಾಗಿ ಇನ್ನೂ ನಿರೀಕ್ಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News