×
Ad

ಆಪರೇಶನ್ ಸಿಂಧೂರ್ ನಿಲ್ಲಿಸುವಂತೆ ಯಾವುದೇ ವಿಶ್ವನಾಯಕ ಭಾರತವನ್ನು ಕೇಳಿಕೊಂಡಿರಲಿಲ್ಲ: ಪ್ರಧಾನಿ ಮೋದಿ

Update: 2025-07-29 22:15 IST

 ನರೇಂದ್ರ ಮೋದಿ |PTI 

ಹೊಸದಿಲ್ಲಿ.ಜು.29: ಅಪರೇಶನ್ ಸಿಂಧೂರ್ ಬಳಿಕ ಕದನವಿರಾಮಕ್ಕಾಗಿ ಪಾಕಿಸ್ತಾನವೇ ಭಾರತಕ್ಕೆ ಮನವಿ ಮಾಡಿತ್ತೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪುನರುಚ್ಚರಿಸಿದ್ದಾರೆ. ಆಪರೇಶನ್ ಸಿಂಧೂರ್ ನಿಲ್ಲಿಸುವಂತೆ ಯಾವುದೇ ವಿಶ್ವನಾಯಕನು ಭಾರತವನ್ನು ಕೇಳಿಕೊಂಡಿರಲಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಲೋಕಸಭೆಯಲ್ಲಿ ‘ಆಪರೇಶನ್ ಸಿಂಧೂರ’ ಕುರಿತ ಚರ್ಚೆಗೆ ಉತ್ತರಿಸಿದ ಅವರು ಮಾತನಾಡುತ್ತಿದ್ದರು. ಆಪರೇಶನ್ ಸಿಂಧೂರ್ ಕಾರ್ಯಾಚರಣೆಗೆ ಸಂಬಂಧಿಸಿ ಮೂರು ದೇಶಗಳನ್ನು ಹೊರತುಪಡಿಸಿ ಇತರ ಎಲ್ಲಾ ದೇಶಗಳು ಭಾರತವನ್ನು ಬೆಂಬಲಿಸಿದ್ದವೆಂದು ಪ್ರಧಾನಿ ಹೇಳಿದರು.

‘‘ ನಮ್ಮ ಕಾರ್ಯಾಚರಣೆಯು ಸಂಘರ್ಷವನ್ನು ಉಲ್ಬಣಿಸುವುದ್ಲಿವೆಂದು ಮೊದಲ ದಿನದಿಂದಲೇ ಹೇಳುತ್ತಾ ಬಂದಿದ್ದೇವೆ. ಆಪರೇಶನ್ ಸಿಂಧೂರ್ ನಿಲ್ಲಿಸುವಂತೆ ಜಗತ್ತಿನ ಯಾವುದೇ ನಾಯಕನು ನಮ್ಮನ್ನು ಕೇಳಿಕೊಂಡಿರಲಿಲ್ಲ’’ ಎಂದು ಅವರು ಹೇಳಿದರು.

ಭಾರತ ಹಾಗೂ ಪಾಕಿಸ್ತಾನದ ನಡುವೆ ಏರ್ಪಟ್ಟ ಕದನವಿರಾಮಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷವು ನಿರಂತರ ಟೀಕಾಪ್ರಹಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಮೇ 9ರಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ತನ್ನೊಂದಿಗೆ ಮಾತನಾಡಲು ಇಚ್ಛಿಸಿದ್ದರು. ಅವರು ಸುಮಾರು ಒಂದು ತಾಸು ಕಾಲ ಪ್ರಯತ್ನಿಸಿದ್ದರು. ಆದರೆ ತಾನು ಸೇನಾಧಿಕಾರಿಗಳ ಜೊತೆ ಮಾತುಕತೆಯಲ್ಲಿ ವ್ಯಸ್ತನಾಗಿದ್ದೆ. ನಾನು ಮರಳಿ ಕರೆ ಮಾಡಿದಾಗ ಅವರು ನನಗೆ ಪಾಕಿಸ್ತಾನ ದೊಡ್ಡದೊಂದು ದಾಳಿಗೆ ಸಂಚುಹೂಡಿದೆಯೆಂದು ನನಗೆ ತಿಳಿಸಿದರು. ಅದಕ್ಕೆ ನಾನು , ಒಂದು ವೇಳೆ ಅದುವೇ ಪಾಕಿಸ್ತಾನದ ಇಂಗಿತವಾಗಿದ್ದಲ್ಲಿ, ಅದು ದೊಡ್ಡದೊಂದು ಬೆಲೆಯನ್ನು ತೆರಲಿದೆ ’’ ಎಂದು ಹೇಳಿರುವುದಾಗಿ ತಿಳಿಸಿದರು.

‘‘ ಒಂದು ವೇಳೆ ಪಾಕಿಸ್ತಾನ ದಾಳಿ ನಡೆಸಿದಲ್ಲಿ, ನಾವು ದೊಡ್ಡ ದಾಳಿಯೊಂದಿಗೆ ಪ್ರತಿಕ್ರಿಯಿಸಲಿದ್ದೇವೆ. ‘ಹಮ್ ಗೋಲಿ ಕಾ ಜವಾಬ್ ಗೋಲೆ ಸೇ ದೇಂಗೆ (ನಾವು ಬುಲೆಟ್ಗೆ ಉತ್ತರವನ್ನು ಫಿರಂಗಿಗುಂಡಿನಿಂದ ನೀಡಲಿದ್ದೇವೆ) ಎಂದು ಹೇಳಿದ್ದಾಗಿ ತಿಳಿಸಿದರು. ಮೇ 10ರಂದು ನಾವು ಪಾಕಿಸ್ತಾನದ ಸೇನಾ ಬಲವನ್ನು ನಾಶಪಡಿಸಿದ್ದೇವೆ. ಭಾರತವು ನೀಡುವ ಪ್ರತಿಯೊಂದು ಪ್ರತಿಕ್ರಿಯೆಯೂ ಹಿಂದಿಗಿಂತ ದೊಡ್ಡದಿರುತ್ತದೆಂಬುದು ಪಾಕ್ ಗೂ ಗೊತ್ತಿದೆ.ಅಗತ್ಯ ಬಿದ್ದಲ್ಲಿ ಭಾರತವು ಯಾವುದೇ ಮಟ್ಟಕ್ಕೆ ಹೋಗಬಹುದೆಂಬುದು ಅದಕ್ಕೆ ತಿಳಿದಿದೆ. ಆಪರೇಶನ್ ಸಿಂಧೂರ್ ಈಗಲೂ ಚಾಲ್ತಿಯಲ್ಲಿದೆ ಎಂಬುದನ್ನು ಪ್ರಜಾಪ್ರಭುತ್ವದ ಈ ದೇವಾಲಯದಲ್ಲಿ ಪುನರುಚ್ಚರಿಸುತ್ತಿದ್ದೇನೆ”, ಎಂದರು.

ಪಹಲ್ಗಾಮ್ ದಾಳಿಯ ಆನಂತರ ಇಡೀ ಜಗತ್ತೇ ಭಾರತವನ್ನು ಬೆಂಬಲಿಸಿತ್ತು. ವಿಷಾದನೀಯವೆಂದರೆ, ನಮಗೆ ಕಾಂಗ್ರೆಸ್ ಪಕ್ಷದ ಬೆಂಬಲ ದೊರೆಯಲಿಲ್ಲವೆಂದು ಪ್ರಧಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News