ವಿಳಿಂಜಂ ಬಂದರು ಸುತ್ತ ಉಲ್ಬಣಗೊಂಡ ರಾಜಕೀಯ ವಿವಾದ; ಯೋಜನೆಯ ಶ್ರೇಯಸ್ಸಿನ ಗರಿಯನ್ನು ಮುಡಿಗೇರಿಸಿಕೊಳ್ಳಲು ಪಕ್ಷಗಳ ಪೈಪೋಟಿ
PC : PTI
ತಿರುವನಂತಪುರಂ: ಮೇ 2(ಶುಕ್ರವಾರ)ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ರಾಷ್ಟ್ರಕ್ಕೆ ಅಧಿಕೃತವಾಗಿ ಸಮರ್ಪಣೆಯಾಗಲಿರುವ ದೇಶದ ಪ್ರಪ್ರಥಮ ಆಳ ಸಮುದ್ರ ಕಂಟೈನರ್ ಸಾಗಣೆ ಬಂದರಾದ ವಿಳಿಂಜಂ ಅಂತಾರಾಷ್ಟ್ರೀಯ ಬಂದರಿನ ಶ್ರೇಯಸ್ಸಿನ ಲಾಭ ಪಡೆಯಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕೂಡಾ ಮುಂದಾಗಿರುವಂತೆ ಕಂಡು ಬರುತ್ತಿದೆ ಎಂದು deccanherald.com ವರದಿ ಮಾಡಿದೆ.
ದೀರ್ಘಕಾಲದಿಂದ ಬಾಕಿಯುಳಿದಿದ್ದ ವಿಳಿಂಜಂ ಅಂತಾರಾಷ್ಟ್ರೀಯ ಬಂದರು ಯೋಜನೆಯ ಕನಸನ್ನು ನನಸಾಗಿಸುವಲ್ಲಿ ತಮ್ಮ ಪಾತ್ರವಿದೆ ಎಂದು ಯೋಜನೆಯ ಶ್ರೇಯಸ್ಸಿನ ಗರಿಯನ್ನು ತಮ್ಮ ಮುಡಿಗೇರಿಸಿಕೊಳ್ಳಲು ಕೇರಳ ರಾಜ್ಯದ ಆಡಳಿತಾರೂಢ ಸಿಪಿಎಂ ಪಕ್ಷ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್ ಪೈಪೋಟಿಗೆ ಬಿದ್ದಿರುವಾಗಲೇ, ವಿಳಿಂಜಂ ಅಂತಾರಾಷ್ಟ್ರೀಯ ಬಂದರಿನ ಸಮರ್ಪಣೆಯ ಕುರಿತು ಬಂದರು ಸಚಿವಾಲಯ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿಕಸಿತ ಭಾರತ 2047ರ ಮುನ್ನೋಟವನ್ನು ಅವರ ಭಾವಚಿತ್ರದೊಂದಿಗೆ ಮುದ್ರಿಸಿದೆ.
ಈ ಜಾಹೀರಾತಿನಲ್ಲಿ ಈ ಯೋಜನೆಗೆ ಕೇರಳ ಸರಕಾರ ನೀಡಿರುವ ಕೊಡುಗೆಯ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ. ಅಲ್ಲದೆ, ಈ ಈ ಸಮಾರಂಭದಿಂದ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸುತ್ತಿರುವ ಹೊತ್ತಿನಲ್ಲೇ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಹೊಳ್ಳಲಿರುವ ಗಣ್ಯರ ಪೈಕಿ ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನೂ ಸೇರ್ಪಡೆಗೊಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ರಾಜ್ಯ ಬಂದರು ಸಚಿವ ವಿ.ಎನ್.ವಾಸವನ್, ಪ್ರಧಾನಿ ಮಂತ್ರಿಗಳ ಕಾರ್ಯಾಲಯದ ಸೂಚನೆಯ ಮೇರೆಗೆ ರಾಜೀವ್ ಚಂದ್ರಶೇಖರ್ ಅವರ ಹೆಸರನ್ನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಉಮ್ಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರಕಾರ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿತು ಹಾಗೂ 2025ರಲ್ಲಿ ಈ ಬಂದರು ನಿರ್ಮಾಣದ ಒಪ್ಪಂದಕ್ಕೆ ಅದಾನಿ ಪೋರ್ಟ್ಸ್‌ನೊಂದಿಗೆ ಸಹಿ ಹಾಕಿತ್ತು ಎಂದು ಕಾಂಗ್ರೆಸ್ ವಾದಿಸುತ್ತಿದೆ.
ಮತ್ತೊಂದೆಡೆ, ಕರಾವಳಿ ಭಾಗದ ಜನರ ತೀವ್ರ ಪ್ರತಿಭಟನೆಯ ಹೊರತಾಗಿಯೂ, 2016ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರಕಾರ ಈ ಯೋಜನೆ ಸಂಪೂರ್ಣಗೊಳ್ಳುವುದನ್ನು ಖಾತರಿಗೊಳಿಸಿತು ಎಂದು ಆಡಳಿತಾರೂಢ ಸಿಪಿಎಂ ವಾದಿಸುತ್ತಿದೆ.
ಕಾಂಗ್ರೆಸ್ ಸರಕಾರ ಸಹಿ ಮಾಡಿದ್ದ 6,000 ಕೋಟಿ ರೂ. ಭ್ರಷ್ಟಾಚಾರ ನಡೆಸುವ ಮೂಲಕ, ಈ ಯೋಜನೆಯನ್ನು ಹಳ್ಳ ಹಿಡಿಸುವ ಕೆಲಸವನ್ನು ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಮಾಡಿತ್ತು ಎಂದು ಸಿಪಿಎಂ ವಿರುದ್ಧ ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಪಕ್ಷದ ಈ ಆರೋಪಕ್ಕೆ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್, ಈ ಯೋಜನೆ ಫಲಪ್ರದಗೊಳ್ಳಬೇಕು ಎಂಬುದು ಸಿಪಿಎಂ ಸರಕಾರದ ಆದ್ಯತೆಯಾಗಿದ್ದುದರಿಂದ, ನಾವು ಈ ಯೋಜನೆಯೊಂದಿಗೆ ಮುಂದುವರಿದೆವು ಎಂದು ಸಮರ್ಥಿಸಿಕೊಂಡಿದ್ದಾರೆ