×
Ad

ಮಧ್ಯಪ್ರದೇಶ | ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ ಗರ್ಭಿಣಿ : ಹೆರಿಗೆ ದಿನಾಂಕ ಕೇಳಿದ ಬಿಜೆಪಿ ಸಂಸದ ರಾಜೇಶ್ ಮಿಶ್ರಾ!

Update: 2025-07-12 21:45 IST

Photo | x.com/Leelasahump

ಸಿಧಿ : ಮಧ್ಯಪ್ರದೇಶದ ಸಿಧಿ ಜಿಲ್ಲೆಯ ತಮ್ಮ ಗ್ರಾಮಕ್ಕೆ ವಾಹನ ಸಂಚಾರಕ್ಕೆ ಅನುಕೂಲಕರವಾದ ರಸ್ತೆಯನ್ನು ಕಲ್ಪಿಸಿ ಕೊಡಿ, ನಮಗೆ ತುರ್ತಾಗಿ ಆಸ್ಪತ್ರೆಗೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಗರ್ಭಿಣಿ ಮಹಿಳೆಯೋರ್ವರು ಹೇಳುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಲೀಲಾ ಸಾಹು ಎಂಬ ಗರ್ಭಿಣಿ ಮಹಿಳೆ, ನಮ್ಮ ಗ್ರಾಮಕ್ಕೆ ಸಂಪರ್ಕ ರಸ್ತೆಯನ್ನು ಕಲ್ಪಿಸಬೇಕು. ಸ್ಥಳೀಯ ಸಂಸದರು ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನಾನು ಮಗುವಿಗೆ ಜನ್ಮ ನೀಡಿದ ಬಳಿಕ ದಿಲ್ಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗುತ್ತೇನೆ. ಆದಷ್ಟು ಬೇಗ ರಸ್ತೆ ನಿರ್ಮಿಸುವಂತೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಸಾಹು ಅವರು ಒಂದು ವರ್ಷದ ಹಿಂದೆ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಕಡ್ಡಿ ಬಗೈಹಾ ಗ್ರಾಮಕ್ಕೆ ಸರಿಯಾದ  ರಸ್ತೆ ಇಲ್ಲ ಎಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೆ ರಸ್ತೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಖಡ್ಡಿ ಖುರ್ಡ್ನಿಂದ ಗಂಗಾರಿಗೆ 10 ಕಿ.ಮೀ ರಸ್ತೆ ಬೇಕು. ನಮ್ಮ ಊರಿನಲ್ಲಿ ನಾನು ಸೇರಿದಂತೆ ಇತರೆ ಐವರು ಗರ್ಭಿಣಿಯರಿದ್ದು, ಆಸ್ಪತ್ರೆಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಹಾಗಾಗಿ ಕೂಡಲೇ ರಸ್ತೆ ನಿರ್ಮಿಸುವಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.  

ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದೆ.  ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿದ್ದೆ. ಕಳೆದ ಮಳೆಗಾಲದ ನಂತರ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಸಿಧಿ ಸಂಸದ ರಾಜೇಶ್ ಮಿಶ್ರಾ ಭರವಸೆ ನೀಡಿದ್ದರು. ಆದರೆ, ಇನ್ನೂ ರಸ್ತೆ ನಿರ್ಮಾಣವಾಗಿಲ್ಲ. ಸಂಸದರು ತಮ್ಮ ಬದ್ಧತೆಯನ್ನು ಪೂರೈಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಈ ಕುರಿತು ಸಂಸದ ರಾಜೇಶ್ ಮಿಶ್ರಾ ಪ್ರತಿಕ್ರಿಯಿಸಿ, ನಮ್ಮಲ್ಲಿ ಆಂಬ್ಯುಲೆನ್ಸ್ ಸೌಲಭ್ಯಗಳಿವೆ. ಚಿಂತಿಸುವ ಅಗತ್ಯವಿಲ್ಲ. ಇದು ಮೋಹನ್ ಯಾದವ್ ಅವರ ಸರಕಾರ. ಹೆರಿಗೆಗೆ ನಿಗದಿತ ದಿನಾಂಕದ ಬಗ್ಗೆ ತಿಳಿಸಿದರೆ, ನಾವು ಅವರನ್ನು ಒಂದು ವಾರದ ಮೊದಲು ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಜನರು ಯಾವುದಾದರೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಬಯಸುತ್ತಾರೆ. ಇದನ್ನು ಈ ರೀತಿ ಮುನ್ನೆಲೆಗೆ ತರುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News